ಪರಸ್ಪರ ಪ್ರೀತಿಯಲ್ಲಿದ್ದ ಯುವಕ – ಯುವತಿ ಮದುವೆಗೆ ಎರಡೂ ಕುಟುಂಬಗಳ ಸದಸ್ಯರು ಒಪ್ಪಿದರೂ ಸಹ ಜ್ಯೋತಿಷಿ ಮಾತು ಕೇಳಿದ ಕಾರಣಕ್ಕೆ ಮದುವೆ ಮುರಿದು ಬಿದ್ದಿದ್ದು ಇದರಿಂದ ಮನನೊಂದ ಜೋಡಿ ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿವರ: ಭದ್ರಾವತಿಯ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಕುಮಾರ್ ಮೊಕಾಶಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡು ಕುಟುಂಬಗಳ ಸದಸ್ಯರು ಸಹ ಇವರ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದು ದಿನಾಂಕವೂ ಫಿಕ್ಸ್ ಆಗುವುದರಲ್ಲಿತ್ತು.
ಇದರ ಮಧ್ಯೆ ಪ್ರವೀಣ್ ತಾಯಿ ಯುವತಿಯ ಜಾತಕ ತೆಗೆದುಕೊಂಡು ಜ್ಯೋತಿಷಿಯ ಬಳಿ ತೆರಳಿದ್ದಾರೆ. ಆಗ ಆತ ಹುಡುಗಿಗೆ ಕುಜ ದೋಷ ಇದೆ. ಈ ಮದುವೆ ನಡೆದರೆ ನಿಮ್ಮ ಮಗನಿಗೆ ಆಯಸ್ಸು ಕಡಿಮೆಯಾಗಲಿದೆ ಎಂದಿದ್ದಾರೆ. ಇದರಿಂದ ಗಾಬರಿಯಾದ ಪ್ರವೀಣ್ ತಾಯಿ ಈ ಮದುವೆ ಸಾಧ್ಯವಿಲ್ಲ ಎಂದು ಹುಡುಗಿ ಮತ್ತಾಕೆಯ ಕುಟುಂಬಸ್ಥರು ಮುಂದೆ ಹೇಳಿದ್ದಾರೆ.
ಇದು ಪ್ರೀತಿಯಲ್ಲಿದ್ದ ಪ್ರವೀಣ್ ಮತ್ತು ಯುವತಿಗೆ ಆಘಾತ ತಂದಿದೆ. ಹೀಗಾಗಿ ಇಬ್ಬರೂ ಮೇ 30ರಂದು ವಿಷ ಸೇವಿಸಿದ್ದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ ಪ್ರಾಣಾಪಾಯದಿಂದ ಕಾಪಾಡಿದ್ದರು.
ಪ್ರಕರಣಕ್ಕೆ ಟ್ವಿಸ್ಟ್: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಇದೀಗ ಅಂದು ಪ್ರವೀಣ್ ನನಗೆ ಮೊದಲು ವಿಷ ಕುಡಿಸಿದ. ಆತ ವಿಷ ಕುಡಿದನೋ ಇಲ್ಲವೋ ಗೊತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಪ್ರವೀಣ್ ಮತ್ತು ಆತನ ತಾಯಿ ಲಕ್ಷ್ಮಿ ವಿರುದ್ಧ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.