ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಈ ಹಿಂದೆ ಮಾತು ಕೊಟ್ಟಂತೆ ತಮಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸತ್ತ ಸದಸ್ಯರೊಬ್ಬರು ಗ್ರಾಮ ಪಂಚಾಯಿತಿ ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಗುರುವಾರದಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ ಈ ಘಟನೆ ನಡೆದಿದ್ದು, ವಿಷ ಸೇವಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೌಸರ್ ಬಾನು ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
2021ರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಸಂದರ್ಭದಲ್ಲಿ ಖಲೀಲ್ ಹಾಗೂ ಕೌಸರ್ ಬಾನು ಅವರ ನಡುವೆ ಒಪ್ಪಂದವಾಗಿತ್ತು ಎಂದು ಹೇಳಲಾಗಿದೆ. 14 ತಿಂಗಳು ಖಲೀಲ್ ಅಧ್ಯಕ್ಷರಾಗಿ ರಾಜೀನಾಮೆ ನೀಡಿದ್ದು, ಒಪ್ಪಂದದಂತೆ ಕೌಸರ್ ಬಾನು ಅವರಿಗೆ ಅವಕಾಶ ನೀಡಬೇಕಿತ್ತು.
ಆದರೆ ಮಹಮ್ಮದ್ ಕಲೀಂ ಅವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡಿದ್ದು, ಇದು ಕೌಸರ್ ಬಾನು ಅವರ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.