ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
21 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಸಂಗ್ರಹಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ.
ಬಿಡಿಎ ಗಾರ್ಡನೇನಿಯರ್ ಶಿವಲಿಂಗಯ್ಯ ಅವರ ಜೆಪಿ ನಗರ, ಬಸವನಗುಡಿ, ದೊಡ್ಡಕಲ್ಲಸಂದ್ರ ನಿವಾಸಗಳ ದಾಳಿ ನಡೆಸಲಾಗಿದೆ.
ಕಲಬುರ್ಗಿ ನಗರದಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ತಿಪ್ಪಣ್ಣ ಅವರ ಕೆ.ಹೆಚ್.ಬಿ. ಕಾಲೋನಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ತಿಪ್ಪಣ್ಣ ಅವರು ಬೀದರ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲಬುರ್ಗಿ ಮತ್ತು ಬೀದರ್ ನಗರದಲ್ಲಿರುವ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಅನೇಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚನೆ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿಯೂ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ರಾಮಕೃಷ್ಣ ಅವರ ಮನೆ, ಕಚೇರಿ ಸೇರಿ ಮೂರು ಕಡೆ ದಾಳಿ ಮಾಡಲಾಗಿದೆ. ವಿದ್ಯಾನಗರದ ನಿವಾಸ, ಹಿರೀಸಾವೆ ನಿವಾಸ ಹಾಗೂ ಕುವೆಂಪುನಗರದ ಕಚೇರಿ, ಮನೆಗಳ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ರಾಮಕೃಷ್ಣ ಅವರ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಮೂರು ಕಡೆ ದಾಳಿ ಮಾಡಲಾಗಿದೆ.
ಬಾಗಲಕೋಟೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರ್ ಗೋಗಿ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆಯ ನವನಗರದ ಶಂಕರ ಗೋಗಿ ನಿವಾಸ ಮತ್ತು ಆಪ್ತರ ಮನೆ ಸೇರಿ ಐದು ಕಡೆ ದಾಳಿ ನಡೆಸಲಾಗಿದೆ.
ಉಡುಪಿಯಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಹರೀಶ್ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉಡುಪಿಯ ಕೊರಂಗ್ರಪಾಡಿಯ ನಿವಾಸದಲ್ಲಿ ದಾಳಿ ಮಾಡಲಾಗಿದೆ.
ಹಾವೇರಿಯಲ್ಲಿ ಎಇ ಚಂದ್ರಪ್ಪ ಓಲೇಕಾರ ಅವರ ಮನೆ ಕಚೇರಿ ಸೇರಿ ಮೂರು ಕಡೆ ದಾಳಿ ನಡೆಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಅಭಿಯಂತರ ಚಂದ್ರಪ್ಪ ಅವರಿಗೆ ಸೇರಿದ ರಾಣೆಬೆನ್ನೂರು ನಗರದಲ್ಲಿರುವ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಮಾಗೋಡ ರಸ್ತೆಯಲ್ಲಿರುವ ಯುಟಿಪಿ ಕಚೇರಿ, ಬ್ಯಾಡಗಿ ತಾಲೂಕಿನ ಆಣೂರು ಗ್ರಾಮದ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಪಿಡಬ್ಲ್ಯುಡಿ ಇಲಾಖೆ ಅಧೀಕ್ಷಕ ಬಿ.ವೈ. ಪವಾರ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ನಿಪ್ಪಾಣಿ ಮತ್ತು ಬೋರಗಾಂವ್ ಸೇರಿದಂತೆ ವಿವಿಧೆಡೆಯಲ್ಲಿರುವ ಮನೆ-ಕಚೇರಿ ಕಾರ್ಖಾನೆಗಳ ಮೇಲೆ ದಾಳಿ ಮಾಡಲಾಗಿದೆ. ಅವರ ಸಂಬಂಧಿಕರ ಮನೆಗಳ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 25 ಕ್ಕೂ ಹೆಚ್ಚು ಎಸಿಬಿ ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಕೊಪ್ಪಳದಲ್ಲಿ ಪೊಲೀಸ್ ಅಧಿಕಾರಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿ ಉದಯರವಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಆಗಿದ್ದ ಉದಯರವಿ ಇತ್ತೀಚೆಗೆ ರಾಜ್ಯ ಗುಪ್ತದಳ ಇಲಾಖೆಗೆ ವರ್ಗಾವಣೆಯಾಗಿದ್ದರು. ಗಂಗಾವತಿಯ ವಡ್ಡರಹಟ್ಟಿಯಲ್ಲಿರುವ ನಿವಾಸ ಹಾಗೂ ಉದಯರವಿ ಸ್ನೇಹಿತನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ
ಧಾರವಾಡದಲ್ಲಿ ಆರ್ಟಿಓ ಅಧಿಕಾರಿ ಮನೆ ಮೇಲೆ ದಾಳಿ ಮಾಡಲಾಗಿದೆ. ಬಾಗಲಕೋಟೆ ಆರ್ಟಿಓ ಯಲ್ಲಪ್ಪ ಪಡಸಾಲಿ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ರಾಜ್ಯದ್ಯಂತ 81 ಕಡೆಗಳಲ್ಲಿ 21 ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 300 ಕ್ಕೂ ಅಧಿಕ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ.