ಬೆಂಗಳೂರು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಇಂದು ರಾಜ್ಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ರಾಜಭವನ ಚಲೋ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ದಟ್ಟವಾಗಿದ್ದು, ಪೊಲೀಸರು ವಾಹನ ಸವಾರರಿಗೆ ಮಾರ್ಗ ಬದಲಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್, ಅಂಬೇಡ್ಕರ್ ಬೀದಿ, ಕಬ್ಬನ್ ರೋಡ್, ಇನ್ ಫ್ಯಾಂಟ್ರಿ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಆಗಲಿದೆ. ಹೀಗಾಗಿ ಸಾರ್ವಜನಿಕರು ಬದಲಿ ರಸ್ತೆ ಬಳಸುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಂಟೋನ್ಮೆಂಟ್ ನಿಂದ ವಿಧಾನಸೌಧದ ಕಡೆ ಹೋಗುವವರು ತಿಮ್ಮಯ್ಯ ಸರ್ಕಲ್ ಬಳಿ ತಿರುವು ಪಡೆದು ವಸಂತನಗರ ಮಾರ್ಗವಾಗಿ ಚಾಲುಕ್ಯ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ತೆರಳಬೇಕು, ಶಿವಾಜಿ ನಗರ, ಎಂಜಿ ರಸ್ತೆ ಕಡೆ ಹೋಗುವವರು ನೇತಾಜಿ ರೋಡ್ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಮಾರ್ಗವಾಗಿ ಮಣಿಪಾಲ್ ಸೆಂಟರ್ ಬಳಿ ಬಲ ತಿರುವು ಪಡೆದು ಕಬ್ಬನ್ ರೋಡ್ ಮೂಲಕ ಹೋಗಬೇಕು.
ಕೆ ಆರ್ ಸರ್ಕಲ್ ಮೂಲಕ ಶಿವಾಜಿನಗರಕ್ಕೆ ಹೋಗುವವರು ನೃಪತುಂಗ ರಸ್ತೆ ಮಾರ್ಗವಾಗಿ ಕಸ್ತೂರ್ಬಾ ರೋಡ್, ಅನಿಲ್ ಕುಂಬ್ಳೆ ಸರ್ಕಲ್ ಮಾರ್ಗವಾಗಿ ಶಿವಾಜಿ ನಗರ ತೆರಳಲು ಪರ್ಯಾಯ ರಸ್ತೆ ಬಳಸಲು ಸೂಚಿಸಲಾಗಿದೆ.