ದುರ್ಗಮ ರಸ್ತೆಗಳಲ್ಲಿ ಚಾಲನೆ ಮಾಡುವುದು ಕೆಲವರಿಗೆ ಗೀಳು. ಇನ್ನೂ ಕೆಲವರಿಗೆ ಸಾಹಸ ಮಾಡುವ ಕ್ರೇಜ್ ಇರುತ್ತದೆ. ಆದರೆ, ಅನೇಕ ಬಾರಿ ಇಂತಹ ಸಾಹಸ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿ ವಿಲವಿಲನೆ ಒದ್ದಾಡುವಂತೆ ಆಗುತ್ತದೆ.
ಇಂತಹ ಇಕ್ಕಟ್ಟಿಗೆ ಪ್ರವಾಸಿಗರ ತಂಡವೊಂದು ಸಿಲುಕಿದ್ದು ಸಿಂಧ್ ನದಿಯಲ್ಲಿ. ಇವರ ನೆರವಿಗೆ ಧಾವಿಸಿದ್ದು ಭಾರತೀಯ ಸೇನೆ. ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ ನಲ್ಲಿನ ಸಿಂಧ್ ನದಿ ಉಕ್ಕಿ ಹರಿಯುತ್ತಿತ್ತು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಬೇಕಾದ ರಸ್ತೆ ಮೇಲೆ ನದಿ ನೀರು ಧುಮ್ಮಿಕ್ಕಿ ಹರಿಯುತ್ತಿತ್ತು.
ಇಂತಹ ಸಂದರ್ಭದಲ್ಲಿಯೇ ಪ್ರವಾಸಿಗರ ತಂಡ ತಮ್ಮ ಜಿಪ್ಸಿ ವಾಹನದಲ್ಲಿ ರಸ್ತೆಯನ್ನು ದಾಟಲು ಮುಂದಾಗಿದೆ. ಆದರೆ, ನೀರು ಹರಿವು ಹೆಚ್ಚಾಗಿದ್ದರಿಂದ ದಾರಿ ಮಧ್ಯದಲ್ಲಿ ನೀರಿನಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೀಡಾದರು.
ಈ ವಿಷಯ ಅರಿತ ಭಾರತೀಯ ಸೇನೆಯ ಸೈನಿಕರು ತಮ್ಮ ಸೇನಾ ಟ್ರಕ್ ನೊಂದಿಗೆ ಕ್ರೇನ್ ಅನ್ನು ಸ್ಥಳಕ್ಕೆ ತಂದರು. ಈ ಕ್ರೇನ್ ಸಹಾಯದಿಂದ ನೀರಿನಲ್ಲಿ ಸಿಲುಕಿದ್ದ ಜಿಪ್ಸಿ ವಾಹನ ಮತ್ತು ಅದರಲ್ಲಿದ್ದ ಪ್ರವಾಸಿಗರನ್ನು ದಡ ಸೇರಿಸಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸೈನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.