ನೀವೇನಾದ್ರೂ ಹೊಸ ಗ್ಯಾಸ್ ಕನೆಕ್ಷನ್ ಪಡೆಯಲು ಯೋಜಿಸ್ತಾ ಇದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಯಾಕಂದ್ರೆ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಹೊಸ ಸಿಲಿಂಡರ್ಗಳ ಸೆಕ್ಯೂರಿಟಿ ಮೊತ್ತವನ್ನು ಏರಿಕೆ ಮಾಡಿವೆ. ಹಾಗಾಗಿ ಹೊಸ ಸಂಪರ್ಕ ಪಡೆಯಲು ನೀವು ಹೆಚ್ಚುವರಿ ಹಣವನ್ನು ಪಾವತಿ ಮಾಡಬೇಕು.
ಹೊಸ ದರಗಳು ಜೂನ್ 16ರಿಂದ್ಲೇ ಜಾರಿಗೆ ಬರುತ್ತಿವೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಎಲ್ಪಿಜಿ ಸಿಲಿಂಡರ್ ಕೂಡ ಸಾಕಷ್ಟು ದುಬಾರಿಯಾಗಿದೆ. ಇದರ ನಡುವೆಯೇ ಮತ್ತೊಂದು ಬೆಲೆ ಏರಿಕೆ ಬರೆ ಗ್ರಾಹಕರ ಮೇಲೆ ಬೀಳ್ತಾ ಇದೆ.
ಗ್ರಾಹಕರು ಇನ್ಮೇಲೆ ಹೊಸ ಕನೆಕ್ಷನ್ಗಾಗಿ ಹೆಚ್ಚುವರಿಯಾಗಿ 750 ರೂಪಾಯಿ ಪಾವತಿಸಬೇಕಾಗುತ್ತದೆ. ಒಟ್ಟಾರೆ ಹೊಸ ಗ್ಯಾಸ್ ಸಂಪರ್ಕಕ್ಕೆ ಈಗ 2200 ರೂ. ವೆಚ್ಚವಾಗಲಿದೆ. ಈ ಮೊದಲು ಪ್ರತಿ ಸಂಪರ್ಕಕ್ಕೆ 1450 ರೂಪಾಯಿ ನಿಗದಿಯಾಗಿತ್ತು. ಗ್ರಾಹಕರು 14.2 ಕೆಜಿಯ ಎರಡು ಸಿಲಿಂಡರ್ ಅನ್ನು ಒಟ್ಟಿಗೆ ತೆಗೆದುಕೊಂಡ್ರೆ ಸೆಕ್ಯೂರಿಟಿ ಮೊತ್ತವಾಗಿ 4400 ರೂಪಾಯಿ ಪಾವತಿಸಬೇಕಾಗುತ್ತದೆ.
ಅಷ್ಟೇ ಅಲ್ಲ ಎಲ್ಪಿಜಿ ರೆಗ್ಯುಲೇಟರ್ ಖರೀದಿಗೂ ಇನ್ಮುಂದೆ ಹೆಚ್ಚಿನ ಹಣ ಕೊಡಬೇಕು. ಮೊದಲು ರೆಗ್ಯುಲೇಟರ್ ಬೆಲೆ 150 ರೂಪಾಯಿ ಇತ್ತು. ಈಗ ಅದನ್ನು 250 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನೊಂದೆಡೆ 5 ಕೆಜಿ ಸಿಲಿಂಡರ್ನ ಸೆಕ್ಯೂರಿಟಿ ಮೊತ್ತವನ್ನು ಕೂಡ ಕಂಪನಿಗಳು ಹೆಚ್ಚಳ ಮಾಡಿವೆ. ಈ ಮೊದಲು 800 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ದರ ಈಗ 1150 ರೂಪಾಯಿಗೆ ಏರಿಕೆಯಾಗಿದೆ.
ಅಷ್ಟೇ ಅಲ್ಲ ಹೊಸ ಗ್ಯಾಸ್ ಕನೆಕ್ಷನ್ನೊಂದಿಗೆ ಕೊಡುವ ಪಾಸ್ಬುಕ್ಗೆ ಗ್ರಾಹಕರು 250 ರೂಪಾಯಿ ಪಾವತಿಸಬೇಕು. ಪೈಪ್ಗೆ 150 ರೂಪಾಯಿ ಕೊಡಬೇಕು. ಗ್ಯಾಸ್ ಸ್ಟವ್ ಬೇಕಾದಲ್ಲಿ ಹೆಚ್ಚುವರಿ ಮೊತ್ತ ಪಾವತಿಸಬೇಕು. ಈ ಮೊದಲು ಇವೆಲ್ಲದಕ್ಕೆ ಪ್ರತ್ಯೇಕ ವೆಚ್ಚ ವಿಧಿಸುತ್ತಿರಲಿಲ್ಲ.