ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಪರೀಕ್ಷಾ ಅಕ್ರಮಗಳದ್ದೇ ದೊಡ್ಡ ಸುದ್ದಿಯಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಬೆಳಕಿಗೆ ಬಂದ ಬಳಿಕ ಒಂದೊಂದಾಗಿ ಇತರೆ ಪರೀಕ್ಷೆಗಳ ಅಕ್ರಮಗಳು ಸಹ ಬಹಿರಂಗವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ನಡೆಯಲಿರುವ ಸಿಇಟಿ ಪರೀಕ್ಷೆ ಕುರಿತಂತೆ ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಈ ಬಾರಿ ಒಟ್ಟು 486 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 87 ಕೇಂದ್ರಗಳು ಬೆಂಗಳೂರಿನಲ್ಲಿಯೇ ಇವೆ. ಈ ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದೆಂಬ ಕಾರಣಕ್ಕೆ ಪ್ರತಿಯೊಂದು ಕೇಂದ್ರದ ಪರೀಕ್ಷಾ ಪ್ರಕ್ರಿಯೆಯನ್ನು ಸಮಗ್ರವಾಗಿ ವಿಡಿಯೋ ಚಿತ್ರೀಕರಣ ಮಾಡುವುದರ ಜೊತೆಗೆ ಪ್ರಶ್ನೆ ಪತ್ರಿಕೆ ಪೂರೈಕೆ ಇತ್ಯಾದಿ ಪ್ರಕ್ರಿಯೆಗಳನ್ನು ಹದ್ದಿನ ಕಣ್ಣಿನ ಪಹರೆಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜೂನ್ 16ರಿಂದ 18 ರ ವರೆಗೆ ನಡೆಯುವ ಈ ಪರೀಕ್ಷೆಯನ್ನು ಒಟ್ಟು 2,16,525 ವಿದ್ಯಾರ್ಥಿಗಳು ಬರೆಯಲಿದ್ದಾರೆ ಎಂದು ತಿಳಿಸಿದ ಉನ್ನತ ಶಿಕ್ಷಣ ಸಚಿವರು, ಪರೀಕ್ಷೆಗೆ ಒಟ್ಟಾರೆ 486 ವೀಕ್ಷಕರು, 972 ವಿಶೇಷ ತಪಾಸಣಾ ಸದಸ್ಯರು, 486 ಪ್ರಶ್ನೆಪತ್ರಿಕೆ ಪಾಲಕರು, 9600 ಕೊಠಡಿ ಮೇಲ್ವಿಚಾರಕರು ಮತ್ತು 20,000 ಕ್ಕೂ ಅಧಿಕ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪರೀಕ್ಷೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವಂತೆ ಸೂಚಿಸಲಾಗಿದೆ ಎಂದರು.