ಶಿವಮೊಗ್ಗ: ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ತಾನು ಏನುಬೇಕಾದರು ಮಾಡಬಹುದು ಎಂದುಕೊಂಡಿದೆ. ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಸರ್ಕಾರ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು 2017ರಲ್ಲೇ ತಿರುಚಿದ್ದಾರೆ. ಹೀಗೆ ತಿರುಚಿದವರ ವಿರುದ್ಧ ಒಂದು ಕೇಸ್ ಕೂಡ ಹಾಕಿಲ್ಲ. ಈಗ ನಾವು ನಾಡಗೀತೆ ತಿರುಚಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
ಇನ್ನು ‘ರಾಮಾಯಣ ದರ್ಶನಂ’ ಪಾಠ ತೆಗೆದಿದ್ದು ಸಿದ್ದರಾಮಯ್ಯ ಸರ್ಕಾರ. ಮೈಸೂರು ಮಹಾರಾಜರ ಪೂರ್ಣ ಪಾಠ ತೆಗೆದಿದ್ದು ಅವರೇ. ಬಸವಣ್ಣನವರಿಗೆ ಅವಮಾನಿಸಿದ್ದು ಸಿದ್ದರಾಮಯ್ಯ ಹೊರತು ನಾವಲ್ಲ. ಹೀಗಿರುವಾಗ ಸಿದ್ದರಾಮಯ್ಯನವರಿಂದ ನಾವು ರಾಷ್ಟ್ರೀಯತೆ ಪಾಠ ಕಲಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಯಾವುದೇ ಮಹನೀಯರ ಪಾಠ ಕೈಬಿಟ್ಟಿಲ್ಲ. ಬಿಜೆಪಿ ಬೆಳವಣಿಗೆ, ಅಭಿವೃದ್ಧಿ ಸಹಿಸದೇ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಇವರಿಗೆ ವಿರೋಧಿಸಲು ಏನೂ ಸಿಗದಿದ್ದಾಗ ಹೀಗೆ ಕೇಸರಿ, ಚಡ್ಡಿ ಬಗ್ಗೆ ಮಾತನಾಡುತ್ತಾರೆ ವೈಚಾರಿಕ ಆಂದೋಲನ ಮಾಡಲು ಅವರ ಬಳಿ ಏನೂ ಇಲ್ಲ. ನಾವು ಪ್ರಶ್ನಿಸುವ ಮೊದಲೇ ಸಿದ್ದರಾಮಯ್ಯ ನೈತಿಕತೆ ಹೊತ್ತು ಮೊದಲು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.