ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು, ಬಸವಣ್ಣ ಸೇರಿದಂತೆ ನಾಡಿನ ಹಲವು ಮಹನೀಯರಿಗೆ ಅಪಮಾನ ಮಾಡಿದೆ. ಹೀಗಾಗಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಇಂದು ತೀರ್ಥಹಳ್ಳಿ ತಾಲ್ಲೂಕಿನ ಕವಿಶೈಲದಿಂದ ಪಾದಯಾತ್ರೆ ಆರಂಭಿಸಲಾಗಿದೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಇದರಲ್ಲಿ ಭಾಗವಹಿಸಿರುವ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕುವೆಂಪು ಅಂದ್ರೆ ಕನ್ನಡ, ಬಸವಣ್ಣ ಅಂದ್ರೆ ಕರ್ನಾಟಕ. ಈಗ ಅವರುಗಳಿಗೇ ಕುತ್ತು ಬಂದಿದೆ ಅಂದಮೇಲೆ ನಾವಿದ್ದು ಮಾಡುವುದೇನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಗೋಕಾಕ್ ಚಳುವಳಿ ನಡೆದಿತ್ತು. ಈಗ ಕುಪ್ಪಳ್ಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ ಎಂದ ಹಂಸಲೇಖ, ಇದು ನಾಡಿನಾದ್ಯಂತ ಮೊಳಗಬೇಕಿದೆ. ನಮ್ಮ ನಾಡು, ನಾಡಗೀತೆ ಎರಡಕ್ಕೂ ಅವಮಾನವಾಗಿದೆ. ಹೀಗಾಗಿ ಇದರ ವಿರುದ್ಧ ನಿರಂತರ ಹೋರಾಟ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.