ಉತ್ತರ ಪ್ರದೇಶ ಸರ್ಕಾರ ಕೋಮು ಗಲಭೆಯಲ್ಲಿ ಪಾಲ್ಗೊಂಡವರ ನಿವಾಸಗಳನ್ನು ಬುಲ್ಡೋಜರ್ ಕಾರ್ಯಾಚರಣೆ ಮೂಲಕ ಧ್ವಂಸಗೊಳಿಸುತ್ತಿದೆ. ಇತರೆ ಕೆಲವೊಂದು ರಾಜ್ಯಗಳು ಇದೇ ಮಾರ್ಗವನ್ನು ಹಿಡಿದಿದ್ದು, ಇದೀಗ ಅದಕ್ಕೆ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಬಿ. ಸುದರ್ಶನ ರೆಡ್ಡಿ, ವಿ. ಗೋಪಾಲ ಗೌಡ ಮತ್ತು ಎ.ಕೆ. ಗಂಗೂಲಿ, ದೆಹಲಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ, ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಹಮದ್ ಅನ್ವರ್ ಸೇರಿದಂತೆ ಹಲವರು ಈ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ವಿ. ರಮಣ ಅವರಿಗೆ ಪತ್ರ ಬರೆದಿದ್ದಾರೆ.
ಅಕ್ರಮ ಬಂಧನ ಹಾಗೂ ಮನೆಗಳ ನೆಲಸಮ ವಿಚಾರವನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದ್ದು, ಉತ್ತರ ಪ್ರದೇಶದಲ್ಲಿ ಪ್ರತಿಭಟನಾನಿರತರ ಮೇಲೆ ನಡೆದ ಹಿಂಸೆ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ.