ಊಟಕ್ಕೆ ಬೆಂಡೆಕಾಯಿ, ಗೊಜ್ಜು, ಸಾಂಬಾರು, ಪಲ್ಯ ಮಾಡುತ್ತಿರುತ್ತೇವೆ. ಒಮ್ಮೆ ಈ ಬೆಂಡೆಕಾಯಿ ಮಜ್ಜಿಗೆ ಹುಳಿ ಟ್ರೈ ಮಾಡಿ ನೋಡಿ. ರುಚಿಯೂ ಚೆನ್ನಾಗಿರುತ್ತೆ. ಮಾಡುವುದಕ್ಕೂ ಸುಲಭವಾಗಿರುತ್ತದೆ. ಮಾಡುವ ವಿಧಾನದ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಬೇಕಾಗುವ ಸಾಮಾಗ್ರಿಗಳು:
ಮಸಾಲೆಗೆ: 11 ಟೇಬಲ್ ಸ್ಪೂನ್-ತೊಗರಿಬೇಳೆ, 1 ಟೀ ಸ್ಪೂನ್ ಅಕ್ಕಿ, 1 ಟೀ ಸ್ಪೂನ್ –ಕೊತ್ತಂಬರಿ ಕಾಳು, ½ ಟೀ ಸ್ಪೂನ್-ಜೀರಿಗೆ, ½ ಕಪ್ ಬಿಸಿ ನೀರು, ಸ್ವಲ್ಪ ಕರಿಬೇವು, 1 ಇಂಚು ಶುಂಠಿ, ½ ಕಪ್- ತೆಂಗಿನಕಾಯಿ ತುರಿ, 1-ಮೆಣಸು. ಇನ್ನು ಹುಳಿಗೆ ಬೇಕಾಗುವ ಸಾಮಾಗ್ರಿ-1 ಕಪ್-ಮೊಸರು, 250 ಗ್ರಾಂ-ಬೆಂಡೆಕಾಯಿ, 1 ಟೀ ಸ್ಪೂನ್ –ಸಾಸಿವೆ, 2 ಟೇಬಲ್ ಚಮಚ-ತೆಂಗಿನೆಣ್ಣೆ, ½ ಟೀ ಸ್ಪೂನ್ –ಜೀರಿಗೆ, ¼ ಟೀ ಸ್ಪೂನ್-ಮೆಂತೆಕಾಳು, 1-ಒಣಮೆಣಸು, ಚಿಟಿಕೆ ಇಂಗು, ಚಿಟಕೆ –ಅರಿಶಿನ, ಸ್ವಲ್ಪ ಕರಿಬೇವು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ತೊಗರಿಬೇಳೆ, ಅಕ್ಕಿ, ಜೀರಿಗೆ, ಕೊತ್ತಂಬರಿಕಾಳು ಹಾಕಿ ½ ಕಪ್ ಬಿಸಿ ನೀರು ಸೇರಿಸಿ 15 ನಿಮಿಷ ನೆನೆಸಿಡಿ. ನಂತರ ನೀರು ಸಮೇತ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಅದಕ್ಕೆ ತೆಂಗಿನಕಾಯಿ ತುರಿ, ಕರಿಬೇವು, ಹಸಿಮೆಣಸು, ಶುಂಠಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತೆಂಗಿನೆಣ್ಣೆ ಹಾಕಿ ಅದಕ್ಕೆ ಕತ್ತರಿಸಿಟ್ಟುಕೊಂಡ ಬೆಂಡೆಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದರಲ್ಲಿನ ಲೋಳೆಯೆಲ್ಲಾ ಹೋಗುವವರೆಗೆ ಹುರಿದು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಮೆಂತೆ, ಒಂದು ಕೆಂಪುಮೆಣಸು, ಸ್ವಲ್ಪ ಕರಿಬೇವು, ಚಿಟಿಕೆ ಅರಿಶಿನ ಹಾಕಿ ಕೈಯಾಡಿಸಿ ನಂತರ ಇದಕ್ಕೆ ರುಬ್ಬಿಟ್ಟುಕೊಂಡ ತೆಂಗಿನಕಾಯಿ ಮಿಶ್ರಣ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಹುರಿದಿಟ್ಟುಕೊಂಡ ಬೆಂಡೆಕಾಯಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. 5 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ. ಬೇಕಿದ್ದರೆ ನೀರು ಸೇರಿಸಿ ಕುದಿಸಿಕೊಳ್ಳಿ.