alex Certify ‘ಪ್ರೀತಿ ಕುರುಡು’ ಅದರ ಮುಂದೆ ಪೋಷಕರು – ಸಮಾಜ ಮುಖ್ಯವಾಗುತ್ತಿಲ್ಲ: ಹೈಕೋರ್ಟ್ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರೀತಿ ಕುರುಡು’ ಅದರ ಮುಂದೆ ಪೋಷಕರು – ಸಮಾಜ ಮುಖ್ಯವಾಗುತ್ತಿಲ್ಲ: ಹೈಕೋರ್ಟ್ ಮಹತ್ವದ ಹೇಳಿಕೆ

ಬೆಂಗಳೂರು: ಪೋಷಕರು ಮತ್ತು ಸಮಾಜದ ಪ್ರೀತಿಗಿಂತಲೂ ಬಲಿಷ್ಠವಾದ ಪ್ರೀತಿ ಕುರುಡು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದ ಯುವತಿಯ ಪೋಷಕರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.

ತನ್ನ ಪ್ರಿಯಕರನೊಂದಿಗೆ ಓಡಿಹೋಗಿ ಮದುವೆಯಾಗಿದ್ದ ಹುಡುಗಿ ಪ್ರಿಯಕರನೊಂದಿಗೆ ಇರಲು ಅನುಮತಿ ನೀಡಿದ ಹೈಕೋರ್ಟ್ ಯುವತಿಗೆ ಎಚ್ಚರಿಕೆಯ ಮಾತೊಂದನ್ನು ಹೇಳಿದೆ. ತನ್ನ ಹೆತ್ತವರ ಮಗಳಾಗಿ ಅವರ ಮನೆಗೆ ಹಿಂತಿರುಗಬಹುದು ಎಂದೂ ತಿಳಿಸಿದೆ.

ಟಿ.ಎಲ್. ನಾಗರಾಜು ಅವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ತಮ್ಮ ಮಗಳು ನಿಸರ್ಗಾ ನಿಖಿಲ್ ಜೊತೆಗೆ ನಾಪತ್ತೆಯಾಗಿರುವುದಾಗಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಚಾಲಕನೊಬ್ಬ ಅವಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದ ಎಂದು ದೂರಲಾಗಿತ್ತು. ನ್ಯಾಯಮೂರ್ತಿಗಳಾದ ಬಿ. ಬೀರಪ್ಪ ಮತ್ತು ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಇಬ್ಬರನ್ನು ಹಾಜರುಪಡಿಸಲಾಗಿತ್ತು.

ವಯಸ್ಸಿನ ಪ್ರಕಾರ ಇಬ್ಬರೂ ಮೇಜರ್ ಆಗಿದ್ದು, ಸ್ವಂತ ನಿರ್ಧಾರ ಕೈಗೊಳ್ಳಲು ಅರ್ಹರಾಗಿದ್ದಾರೆ. ನಿಖಿಲ್ ನನ್ನು ಪ್ರೀತಿಸುತ್ತಿದ್ದ ಯುವತಿ ತನ್ನ ಇಚ್ಚೆಯಿಂದಲೇ ಅವನ ಜೊತೆಗೆ ಹೋಗಿದ್ದಳು. ಇಬ್ಬರೂ ದೇವಾಲಯದಲ್ಲಿ ಮದುವೆಯಾಗಿ ಒಟ್ಟಿಗೆ ವಾಸವಾಗಿದ್ದಾರೆ. ಆಕೆ ತನ್ನ ಪತಿಯೊಂದಿಗೆ ಇರಲು ಬಯಸಿದ್ದು, ಪೋಷಕರ ಬಳಿಗೆ ಹೋಗಲು ಇಷ್ಟಪಟ್ಟಿಲ್ಲ. ಇದನ್ನು ಗಮನಿಸಿದ ಹೈಕೋರ್ಟ್, ನಿಖಿಲ್ ಮತ್ತು ನಿಸರ್ಗ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಪೋಷಕರು ಮತ್ತು ನಿಸರ್ಗ ಅವರಿಗೆ ಕೆಲವು ಸಲಹೆ ನೀಡಿದೆ.

ಮಕ್ಕಳಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಪೋಷಕರು ಹಾಗೂ ಪೋಷಕರಿಗೆ ತಮ್ಮ ಜೀವನವನ್ನು ತ್ಯಾಗ ಮಾಡಿದ ಮಕ್ಕಳಿದ್ದಾರೆ ಎನ್ನುವುದು ಇತಿಹಾಸದಿಂದ ಗೊತ್ತಾಗುತ್ತದೆ. ಇಬ್ಬರ ನಡುವೆ ಪ್ರೀತಿ ವಾತ್ಸಲ್ಯವಿದ್ದರೆ ಸಂಸಾರದಲ್ಲಿ ಬಿರುಕು ಮೂಡಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ವಿರುದ್ಧ ಅಥವಾ ಮಕ್ಕಳು ಪೋಷಕರ ವಿರುದ್ಧ ಕೋರ್ಟ್ ಮೊರೆ ಹೋಗುವ ಪ್ರಶ್ನೆಯೇ ಇರುವುದಿಲ್ಲ ಎಂದು ಹೇಳಿದೆ.

ಈ ಪ್ರಕರಣದ ವಿಚಿತ್ರ ಸಂಗತಿ ಮತ್ತು ಸನ್ನಿವೇಶಗಳು ಪ್ರೀತಿ ಕುರುಡು, ಪೋಷಕರು, ಕುಟುಂಬದ ಸದಸ್ಯರು ಮತ್ತು ಸಮಾಜದ ಪ್ರೀತಿಗಿಂತಲೂ ಶಕ್ತಿಶಾಲಿ ಎಂದು ನ್ಯಾಯಾಲಯ ತನ್ನ ಇತ್ತೀಚಿನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ನ್ಯಾಯಾಲಯ ನಿಸರ್ಗಗೆ ಎಚ್ಚರಿಕೆ ನೀಡಿ, ಜೀವನ ಪ್ರತಿಕ್ರಿಯೆ, ಪ್ರತಿಧ್ವನಿ ಮತ್ತು ಪ್ರತಿಬಿಂಬ ಒಳಗೊಂಡಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ಎಂದು ಮನುಸ್ಮೃತಿಯನ್ನು ಉಲ್ಲೇಖಿಸಿದೆ. ಮನುಸ್ಮೃತಿಯ ಪ್ರಕಾರ, ತನ್ನ ಹೆತ್ತವರು ಜನ್ಮನೀಡಲು ಮತ್ತು ಮಕ್ಕಳನ್ನು ಪ್ರೌಢಾವಸ್ಥೆಗೆ ತರಲು ಅನುಭವಿಸುವ ಎಲ್ಲಾ ತೊಂದರೆಗಳನ್ನು 100 ವರ್ಷಗಳಾದರೂ ತೀರಿಸಲು ಸಾಧ್ಯವಿಲ್ಲ. ಯಾವಾಗಲೂ ಪೋಷಕರು ಮತ್ತು ಶಿಕ್ಷಕರಿಗೆ ಇಷ್ಟವಾದುದನ್ನು ಮಾಡಿ ಎಂದು ಹೇಳಿದೆ. ನಿಸರ್ಗ ಅವರ ತಂದೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...