ಮುಂಬೈ: ಇಂದು ಹ್ಯಾಕ್ ಆಗಿದ್ದ ಮಹಾರಾಷ್ಟ್ರ ಸರ್ಕಾರದ ವಿವಿಧ ವೆಬ್ ಸೈಟ್ ಗಳನ್ನು ಈಗ ಮರು ಸ್ಥಾಪಿಸಲಾಗಿದೆ.
ಸೈಬರ್ ಸೆಲ್ ಪ್ರಕರಣದ ತನಿಖೆ ತೀವ್ರಗೊಳಿಸಿದ್ದು, ಹ್ಯಾಕ್ ಆಗಿರುವ ಎಲ್ಲಾ ವೆಬ್ ಸೈಟ್ ಗಳನ್ನು ಮರುಸ್ಥಾಪಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಥಾಣೆ ಸಿಟಿ ಪೊಲೀಸ್ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಲಾದ ವೆಬ್ ಸೈಟ್ ನಲ್ಲಿ ಪ್ರವಾದಿ ವಿವಾದದ ಕುರಿತು ‘ಮುಸ್ಲಿಮರಿಗೆ ಕ್ಷಮೆಯಾಚಿಸಬೇಕು’ ಎಂಬ ಸಂದೇಶವು ಕಾಣಿಸಿಕೊಳ್ಳುತ್ತಿತ್ತು. ಇದೇ ರೀತಿಯಲ್ಲಿ 500ಕ್ಕೂ ಹೆಚ್ಚು ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಎಡಿಜಿ ಮಧುಕರ್ ಪಾಂಡೆ ಮಾಹಿತಿ ನೀಡಿದ್ದಾರೆ.
ತಾಂತ್ರಿಕ ತಜ್ಞರು ದತ್ತಾಂಶವನ್ನು ಮರುಪಡೆದುಕೊಂಡಿದ್ದು, ವೆಬ್ ಸೈಟ್ ಮರುಸ್ಥಾಪಿಸಲಾಗಿದೆ ಎಂದು ಹಿರಿಯ ಅಧಿಕಾರಿ ಸುನೀಲ್ ಲೋಖಂಡೆ ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಹ್ಯಾಕಿಂಗ್ ನಡೆದಿದೆ ಎಂದು ಲೋಖಂಡೆ ತಿಳಿಸಿದ್ದು, ಥಾಣೆ ಸಿಟಿ ಪೊಲೀಸರ ಸೈಬರ್ ತಂಡ ಈ ಬಗ್ಗೆ ತನಿಖೆ ನಡೆಸಿದೆ. ಮಹಾರಾಷ್ಟ್ರ ಸೈಬರ್ ಸೆಲ್ ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿ) ಮಧುಕರ್ ಪಾಂಡೆ, ಪ್ರವಾದಿ ಹೇಳಿಕೆ ವಿವಾದದ ಕುರಿತು ದೇಶದಲ್ಲಿ ಪ್ರಸ್ತುತ ಕೋಮು ಉದ್ವಿಗ್ನತೆಯಿಂದಾಗಿ, ಹಲವು ಹ್ಯಾಕರ್ಗಳು ಒಗ್ಗೂಡಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳ ಹೆಸರುಗಳು ಹೊರಹೊಮ್ಮುತ್ತಿವೆ. ಈ ಗ್ಯಾಂಗ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.