ಕ್ರಿಕೆಟ್ ಆಟಗಾರರನ್ನು ಐಪಿಎಲ್ ಟೂರ್ನಿಗಾಗಿ ಹರಾಜು ಹಾಕುವುದನ್ನು ಕೇಳಿದ್ದೇವೆ. ದನ, ಕರು, ಕುರಿ ಇನ್ನಿತರೆ ಪ್ರಾಣಿಗಳನ್ನು ಹರಾಜು ಹಾಕುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಸನ್ನಿವೇಶ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.
ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿನ ಜನರೆಲ್ಲಾ ಪಂಚಾಯ್ತಿ ನಡೆಸಿ ತಮ್ಮ ಜನಪ್ರತಿನಿಧಿಯನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾರೆ. ಇದು ಸಾಧ್ಯವಾಗದಿದ್ದಾಗ ಚುನಾವಣೆ ನಡೆಯುತ್ತದೆ. ಆದರೆ, ಗುನಾ ಜಿಲ್ಲೆಯ ಲಲೊನಿ ಗ್ರಾಮ ಪಂಚಾಯ್ತಿಯ ಸರಪಂಚಳನ್ನು ಹರಾಜು ಹಾಕುವ ಮೂಲಕ ಆಯ್ಕೆ ಮಾಡಲಾಗಿದೆ.
ಅಂದಹಾಗೆ ಈ ಸರಪಂಚ ಹುದ್ದೆ ಹರಾಜಾಗಿದ್ದು ಎಷ್ಟು ಹಣಕ್ಕೆ ಗೊತ್ತೆ? ಬರೋಬ್ಬರಿ 23 ಲಕ್ಷ ರೂಪಾಯಿಗಳಿಗೆ. ಹರಾಜಿನಲ್ಲಿ ಮೊದಲ ಅಭ್ಯರ್ಥಿ ಶ್ಯಾಮ ಬಾಯಿ 22 ಲಕ್ಷ ರೂಪಾಯಿಗೆ ಬಿಡ್ ಮಾಡಿದರೆ, ಎರಡನೇ ಅಭ್ಯರ್ಥಿ ಕಾಂತಿಬಾಯಿ ಮೀನಾ ಅವರು 23 ಲಕ್ಷ ರೂಪಾಯಿಗೆ ಬಿಡ್ ಮಾಡುವ ಮೂಲಕ ಸರಪಂಚ ಹುದ್ದೆಯನ್ನು ತಮ್ಮದಾಗಿಸಿಕೊಂಡರು.
ಲಲೊನಿಯಲ್ಲಿ ದೇವಾಲಯವೊಂದು ನಿರ್ಮಾಣವಾಗುತ್ತಿತ್ತು. ಆದರೆ, ಆರ್ಥಿಕ ಮುಗ್ಗಟ್ಟಿನಿಂದ ಹಲವು ವರ್ಷಗಳಿಂದ ನಿರ್ಮಾಣ ಕಾರ್ಯ ಪೂರ್ಣಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಚುನಾವಣೆಗೆ ಸ್ಪರ್ಧೆ ಇಲ್ಲದ ರೀತಿಯಲ್ಲಿ ದೇವಾಲಯ ನಿರ್ಮಾಣಕ್ಕೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರನ್ನು ಸರಪಂಚರನ್ನಾಗಿ ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದರು.
ಈ ಮೂಲಕ ಸರಪಂಚ ಹುದ್ದೆಯನ್ನು ಹರಾಜಿಗಿಡಲು ನಿರ್ಧರಿಸಲಾಯಿತು. ಅಭ್ಯರ್ಥಿಗಳಾಗಿ ಕಾಂತಿ ಮತ್ತು ಶ್ಯಾಮ ಅವರು ಕಣದಲ್ಲಿದ್ದು, ಹರಾಜಿನಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಿಡ್ ಕೂಗಿದರು.