ರಷ್ಯಾದಲ್ಲಿ ಪೊಲೀಸರ ಅತಿರೇಕ ತಾರಕಕ್ಕೇರಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವುದನ್ನು ವಿರೋಧಿಸಿದ ಮಹಿಳೆಯರನ್ನು ಬಂಧಿಸಿರುವ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿ ಅಮಾನವೀಯ ವರ್ತನೆಯನ್ನು ತೋರಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ನಿಝ್ನಿ ನೊವ್ಗೊರೊಡ್ ನಗರದಲ್ಲಿ 20 ಕ್ಕೂ ಹೆಚ್ಚು ಮಹಿಳೆಯರು ಯುದ್ಧದ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದರು. ಇವರನ್ನು ಬಂಧಿಸಿದ ಪೊಲೀಸರು ಮಹಿಳಾ ಪೊಲೀಸರ ಎದುರು ವಿವಸ್ತ್ರರಾಗಿ ಕುಕ್ಕರುಗಾಲಲ್ಲಿ ಕುಳಿತುಕೊಳ್ಳುವಂತೆ ಆದೇಶ ನೀಡಿದ್ದಾರೆ. ವಿಚಿತ್ರವೆಂದರೆ, ಈ ಸಂದರ್ಭದಲ್ಲಿ ಬಾಗಿಲು ತೆರೆದಿದ್ದು, ಪುರುಷ ಪೊಲೀಸರು ನಗ್ನಗೊಂಡ ಮಹಿಳೆಯರನ್ನು ನೋಡಿಕೊಂಡೇ ಓಡಾಡಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರ ಪರ ವಕೀಲರು, ಪೊಲೀಸರು ಮಹಿಳೆಯರಿಗೆ ಅತ್ಯಂತ ಕೀಳುಮಟ್ಟದಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಕಾನೂನನ್ನು ಉಲ್ಲಂಘಿಸಿ ಪೊಲೀಸರು ಅಮಾನುಷವಾಗಿ ಪ್ರತಿಯೊಬ್ಬ ಮಹಿಳೆಯರನ್ನು ವಿವಸ್ತ್ರಗೊಳಿಸಿ ತಪಾಸಣೆ ನಡೆಸಿದ್ದಾರೆ. ಈ ಮಹಿಳೆಯರನ್ನು ಐದು ಬಾರಿ ವಿವಸ್ತ್ರಗೊಳಿಸಿ ವಿಚಾರಣಾ ಅಧಿಕಾರಿ ಮುಂದೆ ಕೂರಿಸಿದ್ದಾರೆ ಎಂದು ವಕೀಲರಾದ ಒಲಿಂಪಿಯಾಡ ಉಸನೊವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಗಳು ಕೊಠಡಿಯ ಬಾಗಿಲನ್ನು ಹಾಕದೇ ವಿಚಾರಣೆ ನಡೆಸಿದ್ದಾರೆ. ವಿವಸ್ತ್ರಗೊಳಿಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುರುಷ ಅಧಿಕಾರಿಗಳು ಇಣುಕಿ ನೋಡುತ್ತಿದ್ದುದು ಅಮಾನವೀಯವಾಗಿದೆ. ಎರಡನೇ ಬಾರಿ ಮಹಿಳೆಯರನ್ನು ಸಿಸಿ ಟಿವಿ ಕ್ಯಾಮೆರಾ ಸಕ್ರಿಯವಾಗಿರುವ ಜಾಗಕ್ಕೆ ಕರೆಯಿಸಿ ಅವರನ್ನು ವಿವಸ್ತ್ರಗೊಳಿಸಲಾಗಿದೆ ಎಂದೂ ವಕೀಲರು ಆರೋಪಿಸಿದ್ದಾರೆ.
ಇದೇ ವೇಳೆ ಪುರುಷ ಪ್ರತಿಭಟನಾಕಾರರನ್ನೂ ಬಂಧಿಸಲಾಗಿತ್ತು. ಆದರೆ, ಅವರನ್ನು ವಿವಸ್ತ್ರಗೊಳಿಸಿ ಕೂರಿಸದೇ ವಿಚಾರಣೆ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.