ತಾಯಿ ಪ್ರೀತಿ ಅಂದ್ರೇನೆ ಹಾಗೆ, ಆ ಪ್ರೀತಿಯ ಮುಂದೆ ಯಾವ ಪ್ರೀತಿಯೂ ಕೂಡಾ ಅಷ್ಟಕ್ಕಷ್ಟೆ. ಮನುಷ್ಯರಾದ್ರೆ ತಮ್ಮ ತಮ್ಮ ಪ್ರೀತಿಯನ್ನ ಭಾವನೆ ಮೂಲಕವೋ ಇಲ್ಲಾ ಮಾತಿನ ಮೂಲಕವೋ ವ್ಯಕ್ತಪಡಿಸುತ್ತಾರೆ.
ಆದರೆ ಪ್ರಾಣಿಗಳು ತಮ್ಮ ಪ್ರೀತಿಯನ್ನ ವ್ಯಕ್ತಪಡಿಸೋ ರೀತಿಯೇ ಅನನ್ಯ. ಅಂತಹದ್ದೇ ಒಂದು ದೃಶ್ಯ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಅದು ತಾಯಿ ಕರಡಿ ಮತ್ತು ಮರಿ ಕರಡಿ ಪ್ರೀತಿ ಮತ್ತು ಅದರ ರೀತಿ.
ತಾಯಿಗೆ ತಮ್ಮ ಮಕ್ಕಳೆಂದ್ರೆ ಪಂಚಪ್ರಾಣ ಅದು ಮನುಷ್ಯರಾದ್ರೂ ಅಷ್ಟೆ ಪ್ರಾಣಿಗಳಾದ್ರೂ ಅಷ್ಟೆ. ಅಮ್ಮ ಅಮ್ಮನೇ…… ಮಕ್ಕಳ ರಕ್ಷಣೆಗೆ ಅಮ್ಮ ಏನು ಬೇಕಾದ್ರೂ ಮಾಡಿ ಬಿಡ್ತಾಳೆ ಅನ್ನೋದಕ್ಕೆ ಈ ವಿಡಿಯೋ ಬೆಸ್ಟ್ ಎಗ್ಸಾಂಪಲ್.
ಇಲ್ಲಿ ಒಂದು ಗಂಡು ಕರಡಿ ಮತ್ತು ಹೆಣ್ಣು ಕರಡಿ ಇವೆರಡು ಕಲ್ಲಿನ ಬೆಟ್ಟದ ತುತ್ತತುದಿಯಲ್ಲಿ ಕಿತ್ತಾಡುವುದನ್ನ ನೋಡಬಹುದು. ಹಾಗೆ ಕಿತ್ತಾಡುವಾಗಲೇ ಕರಡಿಗಳು ಬ್ಯಾಲೆನ್ಸ್ ಕಳೆದುಕೊಂಡು ಕೆಳಗೆ ಬಿದ್ದು ಬಿಡುತ್ತೆ. ಅಷ್ಟು ಮೇಲಿಂದ ಬಿದ್ದ ಮೇಲೆ ಗಂಡು ಕರಡಿ ಮತ್ತೆ ಮೇಲೆ ಏಳಲೇ ಇಲ್ಲ. ಆದರೆ ಹೆಣ್ಣು ಕರಡಿ ಬಿದ್ದರೂ ಎದ್ದು ಕುಂಟುತ್ತಾ ಹೋಯಿತು.
ಹಾಗೆ ಕುಂಟುತ್ತಾ ಹೋದ ಆ ಹೆಣ್ಣು ಕರಡಿ ಹೋಗಿದ್ದು, ಮರಿಗಳ ಬಳಿಗೆ. 500 ಪೌಂಡ್ ಭಾರದ ಗಂಡು ಕರಡಿ ಅಷ್ಟು ಮೇಲಿದ್ದ ಬಿದ್ದ ಪೆಟ್ಟಿಗೆ ಸತ್ತು ಹೋಗಿತ್ತು. ಎರಡು ದಿನಗಳ ನಂತರ ಅರಣ್ಯಾಧಿಕಾರಿಗಳು ಹುಡುಕಿದಾಗ ಗಂಡು ಕರಡಿಯ ಶವ ಸಿಕ್ಕಿದೆ.
ಅಲ್ಲಿಂದ ಸುಮಾರು 15 ಮೀಟರ್ ದೂರದ ಪ್ರದೇಶದಲ್ಲಿ ಹೆಣ್ಣು ಕರಡಿ ಮರಿಗಳೊಂದಿಗೆ ಇರುವುದು ಪತ್ತೆಯಾಗಿದೆ. ಅಸಲಿಗೆ ಗಂಡು ಕರಡಿಗಳು ಸಂಯೋಗದ ಸಮಯದಲ್ಲಿ ಹೆಣ್ಣು ಕರಡಿ ಮೇಲೆ, ಮರಿಗಳ ಮೇಲೆ ದಾಳಿ ಮಾಡುವುದು ಸಾಮಾನ್ಯ. ಅದೇ ರೀತಿ ಈ ಬಾರಿಯೂ ದಾಳಿ ಮಾಡಿದಾಗ ಈ ರೀತಿಯ ಅವಘಡ ಸಂಭವಿಸಿದೆ ಅಂತ ಹೇಳಲಾಗುತ್ತಿದೆ.
ಈ ಘಟನೆಯಿಂದ ತಾಯಿ ಮತ್ತು ಮಕ್ಕಳ ಬಾಂಧವ್ಯ ಎಂಥಹದ್ದು ಅನ್ನೋದು ಗೊತ್ತಾಗುತ್ತೆ. ಇದೇ ರೀತಿಯ ಇನ್ನೊಂದು ವಿಡಿಯೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇಲ್ಲಿ ಮಗು ಆಟ ಆಡ್ತಾ ಆಡ್ತಾ ಮನೆಯ ಹೊರಗೆ ಅಂಗಳಕ್ಕೆ ಹೋಗುತ್ತೆ. ಮಗು ಎಲ್ಲಿ ಹೋಯ್ತು ಅಂತ ಹುಡುಕುತ್ತ ಬಂದ ಮಗುವಿನ ಅಮ್ಮ ಅಂಗಳಕ್ಕೆ ಹೋಗಿ ನೋಡುತ್ತಾಳೆ. ಅಲ್ಲೇ ಮಗುವಿನ ಮುಂದೆ ಕಪ್ಪು ಕರಡಿ ನಿಂತಿರುತ್ತೆ. ಇದನ್ನ ಕಂಡು ಗಾಬರಿಯಾದ ಆ ತಾಯಿ ಮಗುವನ್ನ ಎತ್ತಿಕೊಂಡು ಓಡಿ ಬರುತ್ತಾಳೆ.
`ನನಗೆ ಗಾಬರಿಯಾಗಿತ್ತು. ಆ ಕ್ಷಣದಲ್ಲಿ ಏನು ಮಾಡಬೇಕು ಅನ್ನೋದು ನನಗೆ ಗೊತ್ತೆ ಆಗಿಲ್ಲ. ನನ್ನ ಮಗು ಸುರಕ್ಷಿತವಾಗಿದ್ದರೆ ಸಾಕು ಅಂತ ಅದನ್ನ ಎತ್ತಿಕೊಂಡು ಒಳಗೆ ಓಡಿ ಬಂದೆ. ಅದು ಪುಟ್ಟ ಕರಡಿ ಮರಿಯಾಗಿತ್ತು. ನನಗೆ ಅದು ಕರಡಿಯ ಮರಿ ಅನ್ನೋದಕ್ಕಿಂತ ಹೆಚ್ಚಾಗಿ ನನ್ನ ಮಗುವಿಗೆ ಏನೂ ಆಗಬಾರದು ಅನ್ನೋ ಆತಂಕ ಹೆಚ್ಚಿತ್ತು ಅಂತ ಆ ಮಗುವಿನ ಅಮ್ಮ ಸಮಂತಾ ಹೇಳಿದರು. ಅದಕ್ಕೆ ಹೇಳೋದು ಅಮ್ಮ ಎಷ್ಟೆಂದರೂ ಅಮ್ಮನೇ….. ಆ ಸ್ಥಾನ ಯಾರಿಂದಲೂ ತುಂಬುವುದಕ್ಕೆ ಸಾಧ್ಯವೇ ಇಲ್ಲ.
https://youtu.be/BOIdrWsQ5MY