ಮದುವೆ ಸಮಾರಂಭಗಳು, ಮೆರವಣಿಗೆಗಳೆಂದರೆ ವಧು-ವರರ ಕುಟುಂಬಗಳೆರಡರ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಮೆರವಣಿಗೆ, ಡ್ಯಾನ್ಸ್, ಮೋಜು ಮಸ್ತಿಗೆ ಅಲ್ಲಿ ಮಿತಿಯೇ ಇರುವುದಿಲ್ಲ. ಕೆಲವೊಂದು ಮದುವೆಗಳಲ್ಲಿ ಹುಚ್ಚುತನದ ಪ್ರದರ್ಶನವೂ ಆಗುತ್ತದೆ.
ಇಂತಹ ಹುಚ್ಚುತನದ ಪ್ರಕರಣಗಳ ಸಾಲಿಗೆ ಹೈದ್ರಾಬಾದ್ ನಲ್ಲಿ ನಡೆದ ಘಟನೆ ಸೇರಿದೆ. ಇತ್ತೀಚೆಗೆ ಹೈದ್ರಾಬಾದ್ ನ ಚಾರ್ಮಿನಾರ್ ಬಳಿಯಲ್ಲಿ ಮದುವೆ ಮೆರವಣಿಗೆ ನಡೆದಿದೆ. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕಾರನಿಂದ ಇಳಿದು ನೋಟಿನ ಕಂತೆಯಿಂದ 500 ರೂಪಾಯಿಯ ನೋಟುಗಳನ್ನು ತೂರಿದ್ದಾನೆ. ನೋಟನ್ನು ಎತ್ತಿಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಈ ವಿಲಕ್ಷಣ ಘಟನೆಯ ವಿಡಿಯೋ ವೈರಲ್ ಆಗಿದೆ.
ಕುರ್ತಾ ಮತ್ತು ಶೆರ್ವಾನಿ ಧರಿಸಿದ್ದವರು ಮೋಟರ್ ಸೈಕಲ್ ಮತ್ತು ಕಾರುಗಳಲ್ಲಿ ಮೆರವಣಿಗೆ ನಡೆಸಿದ್ದರು. ಮೆರವಣಿಗೆ ಚಾರ್ಮಿನಾರ್ ಸಮೀಪದ ಗುಲ್ಜಾರ್ ಹೌಸ್ ಬಳಿ ಬರುತ್ತಿದ್ದಂತೆಯೇ ಕಾರಿನಿಂದ ಇಳಿದ ವ್ಯಕ್ತಿ ಅಲ್ಲಿದ್ದ ಫೌಂಟೇನ್ ನ ಕಟ್ಟೆಯ ಮೇಲೆ ನಿಂತು 500 ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ತೂರಿದ್ದಾನೆ.
ಇದನ್ನು ಕಂಡ ನಾಗರಿಕರು ನೋಟುಗಳನ್ನು ಬಾಚಿಕೊಳ್ಳಲು ಪರಸ್ಪರ ತಳ್ಳಾಟ ಮಾಡಿದ್ದಾರೆ. ಇನ್ನೂ ಕೆಲವು ನಾಗರಿಕರು ತಮ್ಮ ಮೊಬೈಲ್ ಗಳಲ್ಲಿ ಈ ದೃಶ್ಯವನ್ನು ವಿಡಿಯೋ ಮಾಡಿಕೊಳ್ಳುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ. ಈ ಘಟನೆಗೆ ಕಾರಣರಾದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.