ದಕ್ಷಿಣ ಕನ್ನಡ ಜಿಲ್ಲೆ ತಲಪಾಡಿಯ ದೇವಿ ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ತನ್ನ ತಾಯಿಯ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ರಮೇಶ್ – ಮಂಜುಳಾ ದಂಪತಿಯ ಪುತ್ರ 14 ವರ್ಷದ ಪೂರ್ವಜ್ ಮೃತ ಬಾಲಕನಾಗಿದ್ದು, ಶನಿವಾರದಂದು ಇತರ ತಾಯಿಯ ಜನ್ಮದಿನವಿತ್ತು ಎಂದು ಹೇಳಲಾಗಿದೆ. ಹೀಗಾಗಿ ತಾಯಿಗೆ ಶುಭಾಶಯ ಕೋರಲು ಮೊಬೈಲ್ ನೀಡುವಂತೆ ಹಾಸ್ಟೆಲ್ ವಾರ್ಡನ್ ಗೆ ಪರಿಪರಿಯಾಗಿ ಕೇಳಿದ್ದಾನೆ.
ಆದರೆ ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್ ವಾರ್ಡನ್ ಬಾಲಕನಿಗೆ ಮೊಬೈಲ್ ನೀಡಿಲ್ಲ. ಇದರಿಂದ ತೀವ್ರವಾಗಿ ನಿರಾಶೆಗೊಂಡ ಪೂರ್ವಜ್, ಡೆತ್ ನೋಟ್ ಬರೆದಿಟ್ಟು ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಭಾನುವಾರ ಬೆಳಗ್ಗೆ ಮತ್ತೊಬ್ಬ ವಿದ್ಯಾರ್ಥಿ ಇದನ್ನು ಗಮನಿಸಿ ವಾರ್ಡನ್ ಗೆ ಮಾಹಿತಿ ನೀಡಿದ್ದಾನೆ.
ಈ ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ಧ ಪೂರ್ವಜ್ ತಾಯಿ ಮಂಜುಳಾ ಸಹೋದರ ಅರುಣ್ ದೂರು ನೀಡಿದ್ದಾರೆ.