ಕೋಲ್ಕತ್ತಾ: ಏಷ್ಯನ್ ಕಪ್ 2023 ಕ್ವಾಲಿಫೈಯರ್ ನಲ್ಲಿ ಭಾರತ –ಅಫ್ಘಾನಿಸ್ತಾನ ನಡುವೆ ಶನಿವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಹೊಡೆದಾಟವೇ ನಡೆದಿದೆ. ಆಟಗಾರರ ನಡುವೆ ಒದೆ ಮತ್ತು ಪಂಚ್ ಗಳು ವಿನಿಮಯವಾಗಿವೆ.
ಎರಡೂ ತಂಡಗಳ ಆಟಗಾರರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಏಷ್ಯನ್ ಕಪ್ 2023 ಗಾಗಿ ನಡೆದ ಈ ಕ್ವಾಲಿಫೈಯರ್ ಪಂದ್ಯದಲ್ಲಿ ಫಲಿತಾಂಶ ಬಂದ ನಂತರ ಈ ಘಟನೆ ಸಂಭವಿಸಿದೆ.
ಪಂದ್ಯದಲ್ಲಿ ಭಾರತ ತಂಡ ಕೊನೆಯ ಕ್ಷಣಗಳಲ್ಲಿ ಗೋಲು ಗಳಿಸಿ ಜಯ ಸಾಧಿಸಿತು. ಇದನ್ನು ಅಫ್ಘಾನ್ ಆಟಗಾರರು ಅರಗಿಸಿಕೊಳ್ಳಲಾಗದೆ ಹತಾಶೆಯಿಂದ ಭಾರತದ ಆಟಗಾರರ ಜತೆ ವಾಗ್ದಾಳಿ ನಡೆಸಿದರು. ಆರಂಭದಲ್ಲಿ ಇಬ್ಬರು-ಮೂವರು ಆಟಗಾರರ ನಡುವೆ ಜಟಾಪಟಿ ಆರಂಭವಾದರೂ ಕ್ರಮೇಣ ಹೆಚ್ಚಾಗಿದೆ. ಎರಡೂ ಕಡೆಯ ಅರ್ಧಕ್ಕೂ ಹೆಚ್ಚು ಆಟಗಾರರು ಈ ಹೊಡೆದಾಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬೆಂಚ್ ಮೇಲೆ ಕುಳಿತ ಆಟಗಾರರು ಕೂಡ ಮೈದಾನಕ್ಕೆ ಬಂದರು. ಮೊದಲು ಕೆಲವು ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ನಂತರ ಕಿಕ್ ಮಾಡಿಕೊಂಡಿದ್ದಾರೆ.
ಕೊನೆಯ ಕ್ಷಣಗಳಲ್ಲಿ ಭಾರತದ ಗೆಲುವು
ಈ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿತ್ತು. ಎರಡೂ ತಂಡಗಳ ನಡುವೆ ಸಮಬಲದ ಪೈಪೋಟಿ ಕಂಡು ಬಂದಿತು. 84 ನಿಮಿಷಗಳವರೆಗೆ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 85ನೇ ನಿಮಿಷದಲ್ಲಿ ಭಾರತದ ಸುನಿಲ್ ಛೆಟ್ರಿ ಫ್ರೀ ಕಿಕ್ ನಲ್ಲಿ ಗೋಲು ಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದಾಗ್ಯೂ, ಈ ಮುನ್ನಡೆ ಕೇವಲ 3 ನಿಮಿಷಗಳ ಕಾಲ ಉಳಿಯಿತು. ಅಫ್ಘಾನ್ ಆಟಗಾರ ಜುಬೈರ್ ಅಮಿರಿ 88 ನೇ ನಿಮಿಷದಲ್ಲಿ ಹೆಡರ್ ಮಾಡಿ ಪಂದ್ಯವನ್ನು ಸಮಬಲಗೊಳಿಸಿದರು. ಭಾರತದ ಅಬ್ದುಲ್ ಸಮದ್ ಅವರು ಅದ್ಭುತ ಗೋಲು ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.
ಡಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿ ಭಾರತ
ಏಷ್ಯನ್ ಕಪ್ 2023 ರ ಅಂತಿಮ ಅರ್ಹತಾ ಸುತ್ತಿನಲ್ಲಿ, ಗ್ರೂಪ್-ಡಿ ಪಂದ್ಯದಲ್ಲಿ ಭಾರತ ತಂಡವು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಂಗ್ ಕಾಂಗ್ ಮೊದಲ ಸ್ಥಾನದಲ್ಲಿದೆ.