ನಟಿ ನಯನತಾರಾಗೂ ವಿವಾದಗಳಿಗೂ ಬಿಡಿಸಲಾಗದ ನಂಟು. ಈ ಮೊದಲು ವಿವಾಹದ ಕಾರಣಕ್ಕೆ ಗಾಸಿಪ್ ಕಾಲಂಗಳಲ್ಲಿ ರಾರಾಜಿಸುತ್ತಿದ್ದ ಈ ನಟಿಯ ಹೆಸರು ಮೂರು ದಿನಗಳ ಹಿಂದೆ ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ವೈವಾಹಿಕ ಬದುಕಿಗೆ ಕಾಲಿರಿಸಿದ ಬಳಿಕ ತೆರೆಬಿದ್ದಿತ್ತು.
ಆದರೆ ಮದುವೆಯಾದ ಮರುದಿನವೇ ನಯನತಾರಾ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಪತಿ ವಿಘ್ನೇಶ್ ಶಿವನ್ ಜೊತೆ ತಿರುಪತಿ ತಿರುಮಲ ದೇಗುಲಕ್ಕೆ ನಯನತಾರಾ ಭೇಟಿ ನೀಡಿದ್ದ ವೇಳೆ ಚಪ್ಪಲಿ ಧರಿಸಿದ್ದರು ಎಂಬ ಅಂಶ ಈಗ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ಜೋಡಿ ದೇಗುಲದ ನಿಯಮಾವಳಿಗಳನ್ನು ಮೀರಿ ಫೋಟೋ ಶೂಟ್ ಮಾಡಿಸಿಕೊಂಡಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ದೇಗುಲದ ಆಡಳಿತ ಮಂಡಳಿ, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಗೆ ನೋಟಿಸ್ ನೀಡಿ ವಿವರಣೆ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದೆ. ಇದರ ಮಧ್ಯೆ ಘಟನೆ ಕುರಿತು ಸ್ಪಷ್ಟನೆ ನೀಡಿರುವ ವಿಘ್ನೇಶ್ ಶಿವನ್, ತಿರುಪತಿ ತಿಮ್ಮಪ್ಪನ ಮೇಲೆ ತಾವು ಆಪಾರ ಭಕ್ತಿ ಹೊಂದಿದ್ದು, ಇಲ್ಲಿಯೇ ವಿವಾಹವಾಗಬೇಕೆಂದು ಬಯಸಿದ್ದೆವು. ಆದರೆ ಅದು ಸಾಧ್ಯವಾಗದ ಕಾರಣ ಮರುದಿನ ಇಲ್ಲಿಗೆ ಭೇಟಿ ನೀಡಿದ್ದೆವು ಎಂದಿದ್ದಾರೆ.
ಈ ಸಂದರ್ಭದಲ್ಲಿ ದೇಗುಲದಲ್ಲಿ ಆಪಾರ ಜನಸಂದಣಿ ಇತ್ತು. ಹಾಗಾಗಿ ದೇವಾಲಯದ ಹೊರಗಡೆ ನೆನಪಿಗೋಸ್ಕರ ಗಡಿಬಿಡಿಯಲ್ಲಿ ಫೋಟೋ ತೆಗೆಸಿಕೊಂಡೆವು. ಆ ಸಮಯದಲ್ಲಿ ಚಪ್ಪಲಿ ಹಾಕಿರೋದು ಗಮನಕ್ಕೆ ಬರಲಿಲ್ಲ. ಇದರಿಂದ ಭಕ್ತರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.