ಹುಬ್ಬಳ್ಳಿ: ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ಖಂಡಿಸಿ ದೇಶದ ಹಲವೆಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ. ಅಶ್ವತ್ಥನಾರಾಯಣ, ನೂಪುರ್ ಶರ್ಮಾ ಹೇಳಿಕೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಕೇವಲ ಒಂದು ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಪ್ರತಿಭಟನೆ, ಗಲಭೆ ಇದು ರಾಜಕೀಯ ಪ್ರೇರಿತ. ದೇಶದ ಐಕ್ಯತೆ ವಿಚಾರದಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಇದೇ ವೇಳೆ ಆಪರೇಷನ್ ಕಮಲದ ಬಗ್ಗೆಯೂ ಸುಳಿವು ನೀಡಿದ ಸಚಿವರು, ಕುಟುಂಬ ಪಕ್ಷಗಳ ನಿಲುವಿಗೆ ಬೇಸತ್ತು ಕೆಲವರು ಬಿಜೆಪಿಗೆ ಬರಲಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಯಾರು ಬರ್ತಾರೆ ಎಂಬುದನ್ನು ನೀವೇ ಕಾದು ನೋಡಿ ಎಂದರು.
ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಭವಿಷ್ಯ, ಅವಕಾಶವಿದೆ. ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇನ್ನು ರಾಜ್ಯಸಭೆಯಲ್ಲಿ ಎ ಟೀಂ, ಬಿ ಟೀಂ ಪ್ರಶ್ನೆ ಇಲ್ಲ. ನಮ್ಮ ಸಂಖ್ಯಾಬಲ ಹೆಚ್ಚಿದೆ ಹೀಗಾಗಿ ಸಹಜವಾಗಿ ಗೆಲುವಾಗಿದೆ ಎಂದು ಹೇಳಿದರು.