ಬೆಂಗಳೂರು; ಶಾಸಕ ಹೆಚ್.ಡಿ.ರೇವಣ್ಣ ಅವರ ಮತ ಅಸಿಂಧುಗೊಳಿಸುವಂತೆ ಬಿಜೆಪಿ ಶಾಸಕರು ನೀಡಿದ ದೂರಿಗೆ ಸಂಬಂಧಿಸಿದಂತೆ ರೇವಣ್ಣ ಮತವನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಕ್ಲೀನ್ ಚಿಟ್ ನೀಡಿದ್ದಾರೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ವೇಳೆ ಹೆಚ್.ಡಿ.ರೇವಣ್ಣ ಬ್ಯಾಲೇಟ್ ಪೇಪರ್ ನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು. ರೇವಣ್ಣ ಅವರ ಮತದಾನವನ್ನು ಅಸಿಂಧುಗೊಳಿಸುವಂತೆ ಒತ್ತಾಯಿಸಿದ್ದರು.
ಇದೀಗ ಬಿಜೆಪಿ ದೂರನ್ನು ತಿರಸ್ಕರಿಸಿರುವ ಚುನಾವಣಾಧಿಕಾರಿ, ಸಿಸಿ ಟಿವಿ ದೃಶ್ಯವನ್ನು ಪರಿಶೀಲಿಸಲಾಗಿದೆ. ಮತ ಅಸಿಂಧುವಾಗಿಲ್ಲ. ಇನ್ನು ಚುನಾವಣೆ ವೇಳೆ ರೇವಣ್ಣ ಅವರನ್ನು ಸೂಚಕರನ್ನಾಗಿ ನೇಮಕ ಮಾಡಲಾಗಿತ್ತು. ಡಿ.ಕೆ.ಶಿವಕುಮಾರ್ ಅವರನ್ನು ಕೂಡ ಸೂಚಕರನ್ನಾಗಿ ನೇಮಕ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ಬ್ಯಾಲೇಟ್ ಪೇಪರ್ ತೋರಿಸಬಹುದು. ಇದರಲ್ಲಿ ಮತ ಅಸಿಂಧುಗೊಳಿಸುವ ಪ್ರಶ್ನೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.