ಧಾರವಾಡ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದ ವ್ಯಕ್ತಿಯೊಬ್ಬರು ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಕಾನೂನು ಸೇವಾ ಸಮಿತಿಯ ಮೂಲಕ ಸಲ್ಲಿಸಿದ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಆಧರಿಸಿ ದೂರವಾಗಿದ್ದ ಹೆಂಡತಿ ಮತ್ತು ಮಕ್ಕಳನ್ನು ತ್ವರಿತವಾಗಿ ಪತ್ತೆ ಮಾಡಿ ಗಂಡನೊಂದಿಗೆ ಪುನಃ ಸೇರಿಸಿದ ಕಾರ್ಯವನ್ನು ಹೈಕೋರ್ಟಿನ ಕಾನೂನು ಸೇವಾ ಸಮಿತಿ ಯಶಸ್ವಿಯಾಗಿ ನಿರ್ವಹಿಸಿದೆ.
ಮೆಡ್ಲೇರಿ ಗ್ರಾಮದ ದಿಳ್ಳೆಪ್ಪ ಬೀರಪ್ಪ ಬುಡ್ಡಾಳರ ಎಂಬುವವರು ತನ್ನ ಹೆಂಡತಿ ಮತ್ತು ಮಕ್ಕಳು ಕಾಣೆಯಾಗಿರುವ ಬಗ್ಗೆ ಹೈಕೋರ್ಟ್ ಧಾರವಾಡ ಪೀಠದಲ್ಲಿ ಕಾನೂನು ಸೇವಾ ಸಮಿತಿ ಮೂಲಕ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ಅರ್ಜಿ ಪರಿಗಣಿಸಿ ಪೊಲೀಸರ ನೆರವಿನೊಂದಿಗೆ ತಮಿಳುನಾಡಿನಲ್ಲಿ ಅರ್ಜಿದಾರನ ಹೆಂಡತಿ ಮತ್ತು ಮಕ್ಕಳನ್ನು ಪತ್ತೆ ಹಚ್ಚಿ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್ ಹಾಗೂ ಪಿ.ಕೃಷ್ಣಭಟ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಅರ್ಜಿದಾರನ ಹೆಂಡತಿಯನ್ನು ವಿಚಾರಣೆ ಮಾಡಿ, ತಿಳಿವಳಿಕೆ ನೀಡಿ ಕುಟುಂಬದ ಮಹತ್ವ ಮನವರಿಕೆ ಮಾಡಿಕೊಟ್ಟು, ಗಂಡ, ಹೆಂಡತಿ ಹಾಗೂ ಮಕ್ಕಳು ಒಟ್ಟಾಗಿ ಸಂತೋಷದಿಂದ ಇರುವಂತೆ ತಿಳಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿಗಳಾದ ವೆಂಕಟೇಶ ಆರ್.ಹುಲಗಿ ಅವರ ಸೂಚನೆಯಂತೆ ಉಚಿತ ಕಾನೂನು ಸೇವಾ ಸಮಿತಿಯ ವಕೀಲರಾದ ವಿದ್ಯಾಶಂಕರ ದಳವಾಯಿ ಅವರು ಹೆಬಿಯಸ್ ಕಾರ್ಪಸ್ ಪ್ರಕರಣ ದಾಖಲಿಸಿ ಒಂದೇ ತಿಂಗಳಲ್ಲಿ ಇತ್ಯರ್ಥಗೊಳಿಸುವಲ್ಲಿ ಶ್ರಮಿಸಿದ್ದಾರೆ.