ಅತಿ ವೇಗವಾಗಿ ಕಾರು ಚಲಾಯಿಸಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಶಾಸಕ ಅರವಿಂದ್ ಲಿಂಬಾವಳಿ ಪುತ್ರಿ ಅದನ್ನು ಪ್ರಶ್ನಿಸಿದ ಪೊಲೀಸರ ಜೊತೆ ವಾಗ್ವಾದ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೇ ಘಟನೆಯನ್ನು ತಮ್ಮ ಕ್ಯಾಮರಾದಲ್ಲಿ ಚಿತ್ರೀಕರಿಸುತ್ತಿದ್ದ ಮಾಧ್ಯಮದವರಿಗೂ ಪರಿಣಾಮ ನೆಟ್ಟಗಿರೋಲ್ಲ ಎಂದು ಲಿಂಬಾವಳಿ ಪುತ್ರಿ ಧಮ್ಕಿ ಹಾಕಿದ್ದಾರೆ.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಕಡೆಯಿಂದ ರಾಜಭವನದ ಕಡೆಗೆ ಅರವಿಂದ್ ಲಿಂಬಾವಳಿ ಪುತ್ರಿ ಅತಿ ವೇಗವಾಗಿ ಕಾರಿನಲ್ಲಿ ತೆರಳುತ್ತಿದ್ದು, ಇದನ್ನು ಗಮನಿಸಿದ ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ವೈರ್ ಲೆಸ್ ಸಂದೇಶ ರವಾನಿಸಿ ಕಾರನ್ನು ತಡೆಯುವಂತೆ ಸೂಚಿಸಿದ್ದರು.
ಅದರಂತೆ ಟ್ರಾಫಿಕ್ ಪೊಲೀಸರು ಕ್ಯಾಪಿಟಲ್ ಹೋಟೆಲ್ ಬಳಿ ಕಾರನ್ನು ತಡೆಗಟ್ಟಿದ್ದು, ದಾಖಲೆಗಳನ್ನು ಕೇಳಿದ್ದಾರೆ. ಅಷ್ಟಕ್ಕೇ ಸಿಡಿಮಿಡಿಗೊಂಡ ಯುವತಿ, ನಾನು ಯಾರು ಗೊತ್ತಾ ? ಎಂಎಲ್ಎ ಅರವಿಂದ್ ಲಿಂಬಾವಳಿ ಪುತ್ರಿ. ನನ್ನ ಬಳಿ ಎಲ್ಲ ದಾಖಲೆಗಳಿವೆ. ನನ್ನನ್ನು ತಡೆದರೆ ಪರಿಣಾಮ ನೆಟ್ಟಗಿರೋದಿಲ್ಲವೆಂದಿದ್ದಾರೆ. ಜೊತೆಗೆ ಈ ವಿದ್ಯಾಮಾನವನ್ನು ಚಿತ್ರೀಕರಿಸುತ್ತಿದ್ದವರ ವಿರುದ್ದವೂ ಹರಿಹಾಯ್ದಿದ್ದಾರೆ.
ಕೊನೆಗೆ ಪೊಲೀಸರು ಕಾರಿನ ವಿವರಗಳನ್ನು ಪರಿಶೀಲಿಸಿದ ವೇಳೆ ಈ ಹಿಂದೆಯೂ ಟ್ರಾಫಿಕ್ ನಿಯಮಗಳ ಉಲ್ಲಂಘನೆಗಾಗಿ ಈ ಕಾರಿನ ಮೇಲೆ 9 ಸಾವಿರ ರೂ. ದಂಡ ಬಾಕಿ ಇರುವುದನ್ನು ಗಮನಿಸಿದ್ದಾರೆ. ಜೊತೆಗೆ ಈ ಬಾರಿಯ ನಿಯಮ ಉಲ್ಲಂಘನೆಗಾಗಿ ಒಂದು ಸಾವಿರ ರೂ. ಸೇರಿ ಒಟ್ಟು ಹತ್ತು ಸಾವಿರ ರೂ. ದಂಡ ಪಾವತಿಸಲು ತಿಳಿಸಿದ್ದಾರೆ.
ಆದರೆ ಅರವಿಂದ್ ಲಿಂಬಾವಳಿ ಪುತ್ರಿ ದಂಡ ಪಾವತಿಸಲು ನಿರಾಕರಿಸಿದ್ದು, ಕೊನೆಗೆ ಆಕೆಯೊಂದಿಗಿದ್ದ ಸ್ನೇಹಿತ ದಂಡ ಪಾವತಿಸಿ ಯುವತಿಯೊಂದಿಗೆ ಸ್ಥಳದಿಂದ ತೆರಳಿದ್ದಾರೆ.