ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹಲವು ಪ್ರಮಾದಗಳನ್ನು ಎಸಗಿದ್ದು, ಹೀಗಾಗಿ ಅದನ್ನು ಹಿಂಪಡೆದು ಈ ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಮಾಡಿದ್ದ ಪುಸ್ತಕಗಳನ್ನು ಮುಂದುವರಿಸುವಂತೆ ರಾಜ್ಯಾದ್ಯಂತ ಹಲವರಿಂದ ಒತ್ತಾಯ ಕೇಳಿಬರುತ್ತಿದೆ.
ಅಲ್ಲದೆ ಕಾಂಗ್ರೆಸ್ ಕೂಡ ಈ ಕುರಿತು ಇಂದು ಪ್ರತಿಭಟನೆ ನಡೆಸಿದ್ದು ಇದರ ಮಧ್ಯೆ, ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಬಿ. ಸ್ವಾಮಿರಾವ್ ಹುಚ್ಚಾಟ ಮಾಡುವವರ ಕೈಗೆ ಪಠ್ಯಪುಸ್ತಕ ಪರಿಷ್ಕರಣ ಕಾರ್ಯ ವಹಿಸಿದ್ದು ತಪ್ಪು. ಹೀಗಾಗಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಬರಗೂರು ರಾಮಚಂದ್ರಪ್ಪ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬುಧವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬಿ. ಸ್ವಾಮಿರಾವ್, ಕುವೆಂಪು, ಬಸವಣ್ಣ, ನಾರಾಯಣ ಗುರು, ಧರ್ಮಗುರುಗಳನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆಯನ್ನು ಕೂಡಲೇ ರದ್ದುಗೊಳಿಸಿ ಹಿಂದಿನ ಪಠ್ಯಗಳನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿ ಮೇಧಾವಿಗಳಿದ್ದರೂ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮಾಡಿರುವ ಪ್ರಮಾದಗಳ ಕುರಿತು ಮಾತನಾಡದಿರುವುದು ತಮಗೆ ನೋವು ತಂದಿದೆ ಎಂದು ಬಿ. ಸ್ವಾಮಿರಾವ್ ಈ ಸಂದರ್ಭದಲ್ಲಿ ಹೇಳಿದರು.