ಇಡ್ಲಿಗೆ ಸಾಂಬಾರು ಹೇಳಿ ಮಾಡಿಸಿದ್ದು. ಕೆಲವರಿಗೆ ಸಾಂಬಾರು ಕುಡಿಯುವ ಅಭ್ಯಾಸ ಕೂಡ ಇದೆ. ಆದರೆ ಸಾಂಬಾರು ರುಚಿ ಇರಬೇಕು ಅಷ್ಟೇ.
ಇಡ್ಲಿ ಎಷ್ಟೇ ಚೆನ್ನಾಗಿದ್ದರೂ ಅದಕ್ಕೆ ಮಾಡುವ ಸಾಂಬಾರಿನ ಮೇಲೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಸುಲಭವಾಗಿ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು
ತೊಗರಿ ಬೇಳೆ-1/2 ಕಪ್, ಟೊಮೆಟೊ-2 ಸಣ್ಣಗೆ ಕತ್ತರಿಸಿದ್ದು, ಕ್ಯಾರೆಟ್-2 ಸಣ್ಣಗೆ ಕತ್ತರಿಸಿದ್ದು, ಸಾಂಬಾರು ಪುಡಿ-1 ಚಮಚ, ಅರಿಶಿನ-ಒಂದು ಚಿಟಿಕೆ, ಹುಣಸೇ ಹಣ್ಣಿನ ರಸ-1 ಟೇಬಲ್ ಸ್ಪೂನ್, ನೀರು, ತುಪ್ಪ-1 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಮೊದಲಿಗೆ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಹಾಕಿ ಒಂದು ಕಡೆ ಇಟ್ಟುಕೊಳ್ಳಿ.
ನಂತರ ಕುಕ್ಕರ್ ಗೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಟೊಮೆಟೊ ಹಾಕಿ, ಆಮೇಲೆ ಕ್ಯಾರೆಟ್ ಸೇರಿಸಿ. ಟೊಮೆಟೊ ಮೆತ್ತಗಾಗುವವರೆಗೆ ಚೆನ್ನಾಗಿ ಕೈಯಾಡಿಸಿ. ನಂತರ ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿನ, ನೀರು ಹಾಕಿ 3 ವಿಷಲ್ ಕೂಗಿಸಿಕೊಳ್ಳಿ.
ಕುಕ್ಕರ್ ತಣ್ಣಗಾದ ನಂತರ ಇವೆಲ್ಲವನ್ನೂ ಕಡೆಗೋಲಿನ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಸಾಂಬಾರು ಪುಡಿ ಅಗತ್ಯವಿರುವಷ್ಟು ನೀರು ಹಾಕಿ ಕುದಿಯಲು ಇಡಿ. ಚೆನ್ನಾಗಿ ಕುದ್ದ ನಂತರ ಹುಣಸೇ ಹಣ್ಣಿನ ರಸ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಬೆಲ್ಲ ಬೇಕಿದ್ದರೆ ಸ್ವಲ್ಪ ಹಾಕಿಕೊಳ್ಳಬಹುದು.
ಆಮೇಲೆ ಒಂದು ಒಗ್ಗರಣೆಗೆ ಸೌಟಿನಲ್ಲಿ ತುಸು ತುಪ್ಪ ಹಾಕಿ ಅದಕ್ಕೆ 4 ಕಾಳು ಮೆಂತೆ. ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಸಾಂಬಾರಿಗೆ ಹಾಕಿ. ರುಚಿಕರವಾದ ಇಡ್ಲಿ ಸಾಂಬಾರು ರೆಡಿ.