ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗಳ ಕತ್ತು ಹಿಸುಕಿ ಹತ್ಯೆಗೈದು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಕಗ್ಗುಂಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸುರೇಶ್ ಎಂಬಾತ ತನ್ನ ಪುತ್ರಿ 17 ವರ್ಷದ ಶಾಲಿನಿಯನ್ನು ಹತ್ಯೆ ಮಾಡಿದ್ದಾನೆ. ಶಾಲಿನಿ ಪಿರಿಯಾಪಟ್ಟಣದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ತನ್ನದೇ ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ಸುರೇಶ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಈ ಹಿಂದೆ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರ ವಿಚಾರಣೆ ವೇಳೆ ಶಾಲಿನಿ ತಾನು ಆತನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ. ಆದರೆ ಆಕೆಗೆ ಹದಿನೆಂಟು ವರ್ಷ ತುಂಬಿರದ ಕಾರಣ ಪೊಲೀಸರು ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು.
ಕೆಲ ದಿನಗಳ ಹಿಂದೆ ತನ್ನ ಪೋಷಕರಿಗೆ ಕರೆ ಮಾಡಿದ ಶಾಲಿನಿ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಳು. ಅದರಂತೆ ಆಕೆಯನ್ನು ಸುರೇಶ್ ಮನೆಗೆ ಕರೆದುಕೊಂಡು ಬಂದಿದ್ದು, ಆದರೆ ಶಾಲಿನಿ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಪಟ್ಟುಹಿಡಿದಳು ಎನ್ನಲಾಗಿದೆ. ಹೀಗಾಗಿ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ ಸುರೇಶ್ ಪೊಲೀಸರಿಗೆ ಈಗ ಶರಣಾಗಿದ್ದಾನೆ.