ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಮುಗಿಲು ಮುಟ್ಟಿದ್ದು, ಪರಿಷ್ಕರಣೆ ನೆಪದಲ್ಲಿ ಪಠ್ಯಪುಸ್ತಕಗಳಲ್ಲಿ ಕೋಮುವಾದ ಅಳವಡಿಸಲಾಗುತ್ತದೆ ಎಂಬ ಆರೋಪ ಹಲವು ಸಾಹಿತಿಗಳು, ಕನ್ನಡಪರ ಹೋರಾಟಗಾರರಿಂದ ಕೇಳಿಬಂದಿದೆ. ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಸಹ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು ಹಳೇ ಪಠ್ಯಗಳನ್ನೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.
ಇದರ ಮಧ್ಯೆ ಎನ್.ಎಸ್.ಯು.ಐ. ಕಾರ್ಯಕರ್ತರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ ಸಿ ನಾಗೇಶ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದು, ಜೊತೆಗೆ ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನ ಜಯನಗರದಲ್ಲಿರುವ ರೋಹಿತ್ ಚಕ್ರತೀರ್ಥ ಅವರ ನಿವಾಸಕ್ಕೆ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ಮಧ್ಯೆ ತಮ್ಮ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿರುವ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರೋಹಿತ್ ಚಕ್ರತೀರ್ಥ, ಸಂಶೋಧಕರಿಗೆ ಸತ್ಯ ಮುಖ್ಯವಾಗಿರುತ್ತದೆ ಆದರೆ ಸರ್ಕಾರಕ್ಕೆ ಮತಗಳು ಮುಖ್ಯ ಎಂದು ಹೇಳಿದ್ದಾರೆ.