ಟೆಕ್ಸಾಸ್: ಗರ್ಲ್‌ಫ್ರೆಂಡ್ ಜತೆಗೆ ಜಗಳವಾಡಿದ ವ್ಯಕ್ತಿಯೊಬ್ಬ, ಆ ಸಿಟ್ಟನ್ನು ತೀರಿಸಿಕೊಂಡದ್ದು ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್ಸ್‌ನ ಕಲಾಕೃತಿಗಳ ಮೇಲೆ. ಅವುಗಳ ಮೌಲ್ಯ 5 ದಶಲಕ್ಷ ಡಾಲರ್ (40.37 ಕೋಟಿ ರೂಪಾಯಿ)…!
ಅಮೆರಿಕದ ಟೆಕ್ಸಾಸ್‌ನಲ್ಲಿರುವ ಈ ಮ್ಯೂಸಿಯಂನಲ್ಲಿ ದಾಂಧಲೆ ನಡೆಸಿದ ವ್ಯಕ್ತಿಯನ್ನು ಬ್ರಿಯಾನ್ ಹೆರ್ನಾಂಡೆಜ್ (21) ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ 2.3 ಕೋಟಿ ರೂಪಾಯಿ ಮೌಲ್ಯದ ಕಿಡಿಗೇಡಿತನದ ಆರೋಪ ಹೊರಿಸಲಾಗಿದೆ. ಆತನ ಬಳಿ ಶಸ್ತ್ರಾಸ್ತ್ರ ಇರಲಿಲ್ಲ ಎಂಬುದನ್ನೂ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಮ್ಯೂಸಿಯಂನ ಸಿಸಿ ಟಿವಿ ದೃಶ್ಯಾವಳಿ ಪ್ರಕಾರ, ಹೆರ್ನಾಂಡೆಜ್ ಕುರ್ಚಿ ಹಿಡಿದು ರಾತ್ರಿ ಮ್ಯೂಸಿಯಂನ ಪ್ರವೇಶದ್ವಾರದ ಹೊರಗೆ ನಿಂತಿದ್ದ. ಬಳಿಕ ಆರನೇ ಶತಮಾನದ ಗ್ರೀಕ್ ಪ್ರತಿಮೆ ಸೇರಿ ಅಮೂಲ್ಯವಾದ ಕಲಾಕೃತಿಗಳನ್ನು ಒಡೆದುಹಾಕುತ್ತ ಹೋಗಿರುವುದು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ 50 ಲಕ್ಷ ಡಾಲರ್. ಕೈಲಿಕ್ಸ್ ಹೆರಾಕಲ್ಸ್, ನೆಮಿಯಾನ್ ಸಿಂಹದ ಪ್ರತಿಮೆ ಸೇರಿ ಹಲವು ಕಲಾಕೃತಿಗಳು ಈತನ ದಾಂಧಲೆಗೆ ಬಲಿಯಾಗಿವೆ.
ಹೆರ್ನಾಂಡೆಜ್ ಅನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅಪರಾಧ ವರ್ತನೆಯ ಹಿಂದಿನ ನಿಜವಾದ ಕಾರಣವನ್ನು ಒಪ್ಪಿಕೊಂಡಿದ್ದಾನೆ. ಗರ್ಲ್ ಫ್ರೆಂಡ್ ಜತೆಗೆ ಜಗಳವಾಡಿದ್ದು, ಆಕೆಯ ಮೇಲಿನ ಕೋಪ ತೀರಿಸಿಕೊಳ್ಳಲು ಮ್ಯೂಸಿಯಂಗೆ ನುಗ್ಗಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಲಿಕುರ್ಚಿಯಲ್ಲಿ ಮಹಿಳೆಯಂತೆ ವೇಷ ಧರಿಸಿದ ವ್ಯಕ್ತಿಯೊಬ್ಬರು ದಿ ಲೌವ್ರೆಯಲ್ಲಿನ ಲಿಯೊನಾರ್ಡೊ ಡಾ ವಿನ್ಸಿಯವರ ಸಾಂಪ್ರದಾಯಿಕ ವರ್ಣಚಿತ್ರವಾದ ಮೋನಾಲಿಸಾ ಮೇಲೆ ಕೇಕ್ ಮೆತ್ತಿದ 4 ದಿನಗಳ ನಂತರ ಈ ಘಟನೆ ನಡೆದಿದೆ. ಮ್ಯೂಸಿಯಂನ ಕಲಾಕೃತಿಗಳಿಗೆ ವಿಮೆ ಮಾಡಿಸಲಾಗಿತ್ತು. ಹೀಗಾಗಿ ವಿಮಾ ಕಂಪನಿಯವರು ಮೌಲ್ಯ ಮಾಪನ ಮಾಡಿ ಕಲಾಕೃತಿಗೆ ಆಗಿರುವ ಹಾನಿಯ ಸಾಂಪತ್ತಿಕ ನಷ್ಟವನ್ನು ಭರ್ತಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.