ರಾಜ್ಯಸಭೆಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರೀ ಪೈಪೋಟಿ ನಡೆಸುತ್ತಿವೆ. ಕಾಂಗ್ರೆಸ್ ಬೆಂಬಲ ಕೋರಿ ಜೆಡಿಎಸ್ ನಾಯಕರು ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಹೀಗಾಗಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯಬಹುದೆಂಬ ಭೀತಿ ಮೂರೂ ಪಕ್ಷಗಳನ್ನು ಕಾಡುತ್ತಿದ್ದು, ಇದರ ಮಧ್ಯೆ ಬಿಜೆಪಿ ನಾಳೆ ಮಹತ್ವದ ಶಾಸಕಾಂಗ ಪಕ್ಷದ ಸಭೆ ಕರೆದಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಬೆಂಗಳೂರಿನಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದು, ಅಲ್ಲದೇ ಆರ್.ಎಸ್.ಎಸ್. ವಿರುದ್ದ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಆರ್.ಎಸ್.ಎಸ್. ಬಿಟ್ಟರೆ ಮಾತನಾಡಲು ಬೇರೆ ವಿಷಯವಿಲ್ಲ ಎಂದು ಹೇಳಿದ ಅವರು, ಕರ್ನಾಟಕದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಜನರಿಗೆ ರಾಜ್ಯದ ಅಭಿವೃದ್ಧಿ, ಭವಿಷ್ಯದ ಬಗ್ಗೆ ಬೇಕು. ಆ ಬಗ್ಗೆ ಸಿದ್ದರಾಮಯ್ಯನವರು ಮಾತನಾಡಬೇಕು ಎಂದು ಹೇಳಿದರು.