ಬಿಜೆಪಿ ವಿಧಾನ ಪರಿಷತ್ ಸದಸ್ಯರೊಬ್ಬರು ಸ್ವಪಕ್ಷದ ಸಚಿವರ ವಿರುದ್ಧವೇ ಕಿಡಿಕಾರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆರೋಗ್ಯ ಸಚಿವ ಢಾ. ಕೆ. ಸುಧಾಕರ್ ವಿರುದ್ಧ ತಿರುಗಿಬಿದ್ದಿದ್ದು ಅವರೊಬ್ಬ ಅಸಮರ್ಥ ಮಂತ್ರಿಯೆಂದು ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಯನೂರು ಮಂಜುನಾಥ್, ದಪ್ಪ ಚರ್ಮದ ಆರೋಗ್ಯ ಸಚಿವರು ಇಲಾಖೆಯ ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೋವಿಡ್ ಮೊದಲ ಅಲೆಯ ವೇಳೆ ಕಾರ್ಯನಿರ್ವಹಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಇಲ್ಲಿಯವರೆಗೆ ವೇತನ ಪರಿಷ್ಕರಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಧಾಕರ್ ಇತರೆ ಸಚಿವರ ಫೋನ್ ಕರೆಗೂ ಸಿಗುತ್ತಿಲ್ಲ. ಪಕ್ಷದ ಹಿರಿಯ ಶಾಸಕರ ಮನವಿಗೂ ಸ್ಪಂದಿಸುತ್ತಿಲ್ಲ ಎಂದು ಹೇಳಿದ ಆಯನೂರು ಮಂಜುನಾಥ್, ಸ್ವಪಕ್ಷದ ಸಚಿವರ ವಿರುದ್ಧ ಮಾತನಾಡಲು ನಮಗೆ ಮುಜುಗರವಾಗುತ್ತದೆ. ಆದರೆ ಅವರ ವರ್ತನೆ ಇದೇ ರೀತಿ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.