ಕೊಲ್ಕತ್ತಾ: ಪತ್ನಿ ಸರ್ಕಾರಿ ಕೆಲಸಕ್ಕೆ ಹೋಗುವುದನ್ನು ತಡೆಯಲು ವ್ಯಕ್ತಿಯೊಬ್ಬ ಆಕೆಯ ಕೈ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳ ಪೂರ್ವ ಬುರ್ದ್ವಾನ್ ಜಿಲ್ಲೆಯ ಕೇತು ಗ್ರಾಮ್ ದಲ್ಲಿ ನಡೆದಿದೆ.
ಶೇರ್ ಮೊಹಮ್ಮದ್ ಎಂಬಾತನೇ ಪತ್ನಿಯ ಕೈ ಕತ್ತರಿಸಿದ ಆರೋಪಿಯಾಗಿದ್ದಾನೆ. ಪತ್ನಿ ರೇಣು ಖಾತೂನ್ ಅವರಿಗೆ ಪಶ್ಚಿಮಬಂಗಾಳ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ನರ್ಸಿಂಗ್ ಉದ್ಯೋಗ ಸಿಕ್ಕಿದೆ. ಆಕೆ ಕೆಲಸಕ್ಕೆ ಹೋಗುವುದನ್ನು ತಡೆಯಲು ಇಂತಹ ಕೃತ್ಯವೆಸಗಿದ್ದಾನೆ.
ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ರೇಣು ಸಮೀಪದ ದುರ್ಗಾಪುರದ ಕೈಗಾರಿಕಾ ಟೌನ್ ಶಿಪ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಆಕೆಗೆ ಸರ್ಕಾರಿ ನೌಕರಿ ದೊರೆತಿದ್ದು ನೇಮಕಾತಿ ಆದೇಶ ಪತ್ರ ಕೂಡ ಬಂದಿದೆ.
ಸರ್ಕಾರಿ ನೌಕರಿಗೆ ಸೇರಿದರೆ ಪತ್ನಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎಂದುಕೊಂಡ ನಿರುದ್ಯೋಗಿ ಶೇರ್ ಮೊಹಮ್ಮದ್ ಸರ್ಕಾರಿ ಕೆಲಸಕ್ಕೆ ಹೋಗದಂತೆ ಪತ್ನಿಯೊಂದಿಗೆ ಜಗಳವಾಡಿ ಕೈಕತ್ತರಿಸಿದ್ದಾನೆ. ಆಸ್ಪತ್ರೆಗೆ ಹೋದಾಗ ವೈದ್ಯರು ಕೈಜೋಡಣೆ ಮಾಡಲು ಕತ್ತರಿಸಿದ ಭಾಗವನ್ನು ತಂದುಕೊಡುವಂತೆ ಕೇಳಿದರೂ ಆತ ಕೊಡದೆ ತಲೆಮರೆಸಿಕೊಂಡಿದ್ದಾನೆ.