ಭಾರತ, ವಿವಿಧ ಕ್ಷೇತ್ರಗಳಲ್ಲಿ ಅನೇಕ ರಾಷ್ಟ್ರಗಳನ್ನ ಹಿಂದಿಕ್ಕಿದೆ. ಅಷ್ಟೇ ಅಲ್ಲ ಮುಂದುವರಿಯುತ್ತಿರೋ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಕೆಲ ವಿಚಾರಗಳಲ್ಲಿ ಭಾರತ ಇನ್ನೂ ಹಿಂದೆಯೇ ಉಳಿದಿದೆ. ಅದರಲ್ಲೂ ಹಳ್ಳಿಗಳು ಇನ್ನೂ ಹಲವು ಸೌಲಭ್ಯಗಳಿಂದ ವಂಚಿತವಾಗಿ ಉಳಿದಿದೆ. ಅಂಥಹ ಹಳ್ಳಿಗಳಲ್ಲಿ ಉತ್ತರಾಖಂಡದ ಚಮೋಲಿ ಕೂಡಾ ಒಂದು.
ಉತ್ತರಾಖಂಡ ಬೆಟ್ಟಗಳಿಂದ ಆವೃತವಾದ ಪ್ರದೇಶ. ಇಲ್ಲಿನ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಬೇಕಾದರೆ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಜೀವವನ್ನೇ ಒತ್ತೆಯಾಗಿ ಇಟ್ಟು ನಡೆಯುವಂತಹ ರಸ್ತೆ ಅಲ್ಲಿನದ್ದು. ಅಲ್ಲಿನ ಜನರು ಇನ್ನು ಯಾವ ಯಾವ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಅಂತ ಅರಿಯಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸ್ವತಃ 18ಕಿಮೀ ದುರ್ಗಮ ಹಾದಿಯಲ್ಲಿ ನಡೆದಿದ್ಧಾರೆ. ಅವರ ಈ ಚಾರಣದ ಮುಖ್ಯ ಉದ್ದೇಶ ಮತದಾರರ, ಹಾಗೂ ಚುನಾವಣಾ ಅಧಿಕಾರಿಗಳು ಎದುರಿಸೋ ಕಷ್ಟ ಏನು ಅಂತ ತಿಳಿಯುವುದು.
ಈ ಚಮೋಲಿ ಜಿಲ್ಲೆಯ ಮತಗಟ್ಟೆಗಳಾದ ದುಮಾಕ್ ಮತ್ತು ಕಲ್ಗೊತ್ ಗ್ರಾಮಗಳಿಗೆ ರಾಜೀವ್ ಕುಮಾರ್ ತೆರಳಿದ್ದಾರೆ. ಮುಖ್ಯ ಚುನಾವಣಾ ಅಧಿಯಾರಿಯೊಬ್ಬರು ಈ ರೀತಿಯ ದೂರದ ಮತಗಟ್ಟೆಗಳಿಗೆ ತೆರಳಿ ಖುದ್ದು ಪರಿಶೀಲನೆ ಮಾಡಿರುವುದು ಅಪರೂಪದ ನಿದರ್ಶನವಾಗಿದೆ.
‘ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ತಲುಪಲು ಚುನಾವಣಾ ಸಿಬ್ಬಂದಿಗಳಿಗೆ ಕಡಿಮೆ ಅಂದರೂ ಮೂರು ದಿನ ಬೇಕಾಗುತ್ತೆ. ಚುನಾವಣಾ ಸಂದರ್ಭದಲ್ಲಿ ಮತಗಟ್ಟೆ ಸಿಬ್ಬಂದಿ ಎದುರಿಸುವ ಸವಾಲುಗಳನ್ನ ಅರ್ಥ ಮಾಡಿಕೊಳ್ಳಲೆಂದೇ ನಾನು ಇಲ್ಲಿಗೆ ಬಂದಿರೋದು, ಈಗ ಇನ್ನಷ್ಟು ಗ್ರಾಮಗಳಲ್ಲಿನ ಮತಗಟ್ಟೆಗೆ ಭೇಟಿ ನೀಡುವ ಉದ್ದೇಶವಿದೆ‘ ಅಂತ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಹೇಳಿದ್ಧಾರೆ.
ದುಮಾಕ್ ಮತ್ತು ಕಲ್ಗೋತ್ ಮತಗಟ್ಟೆ ಬದರಿನಾಥ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಉತ್ತರಾಖಂಡ್‌ಗಳಲ್ಲಿ ಮತಗಟ್ಟೆಗಳಿಗೆ ತೆರಳುವುದು ಬಹಳ ಸವಾಲಿನ ಕೆಲಸ. ಆದರೂ ಚುನಾವಣಾ ಅಧಿಕಾರಿಗಳು ತಮ್ಮ ಕರ್ತವ್ಯವನ್ನ ಪಾಲಿಸುತ್ತಿದ್ದಾರೆ. ಮತದಾನಕ್ಕೆ ಮೂರು ದಿನ ಮುಂಚೆಯೇ ಮತಗಟ್ಟೆಗಳಿಗೆ ತೆರಳಿ ಯಾವುದೇ ಅಡೆತಡೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಅಂತ ಚುನಾವಣಾ ಆಯುಕ್ತರು ಹೇಳಿದರು.