ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರಿನ ಮುಂದೆ ‘ನಾಡೋಜ’ ಬಳಸದಂತೆ ನಿಯಮ ರೂಪಿಸಲಾಗಿದೆ.
‘ನಾಡೋಜ’ ಪ್ರಶಸ್ತಿ ವಾಪಸ್ ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಂದಿ ಹಾಡಿದೆ ಎಂಬ ಮಾತುಗಳು ಕೇಳಿಬಂದಿವೆ. ಹಂಪಿ ವಿಶ್ವವಿದ್ಯಾಲಯದ ನಿರ್ಣಯದ ಬೆನ್ನಲ್ಲೇ ವಿವಿ ವಿರುದ್ಧ ‘ನಾಡೋಜ’ ಪುರಸ್ಕೃತರಿಂದ ಅಸಮಾಧಾನ ವ್ಯಕ್ತವಾಗಿದೆ. ಗೌರವ ಪ್ರಶಸ್ತಿಯನ್ನು ಮರಳಿಸುವುದರ ಕುರಿತು ಚರ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಇತ್ತೀಚೆಗೆ ನಡೆದ ಕನ್ನಡ ವಿವಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಸಮಿತಿ ಸಭೆಯ ನಿರ್ಣಯಕ್ಕೆ ವಿವಿ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಂಪಿ ವಿವಿಯಿಂದ ‘ನಾಡೋಜ’ ಗೌರವಕ್ಕೆ ಪಾತ್ರರಾದ ಕನ್ಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅವರು ಈ ಬಗ್ಗೆ ಕನ್ನಡ ವಿವಿಗೆ ಪತ್ರ ಬರೆದಿದ್ದು, ಹೆಸರಿನ ಜೊತೆಗೆ ‘ನಾಡೋಜ’ ಬಳಸಬಹುದೇ ಎಂದು ಕೇಳಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಹೆಸರಿನ ಮುಂದೆ ‘ನಾಡೋಜ’ ಪದ ಬಳಸದಂತೆ ಆದೇಶ ನೀಡಲಾಗಿದೆ. ಡಾಕ್ಟರೇಟ್ ಬದಲಿಗೆ ಹಂಪಿ ವಿವಿ ‘ನಾಡೋಜ’ ಪ್ರಶಸ್ತಿಯನ್ನು ನೀಡುತ್ತದೆ. ಪ್ರತಿ ವರ್ಷ ‘ನಾಡೋಜ’ ಪದವಿ ನೀಡಿ ಗೌರವಿಸುತ್ತದೆ.