ಅನ್ನಭಾಗ್ಯ ಯೋಜನೆಯಡಿ 2022ರ ಜೂನ್ ಮಾಹೆಯಲ್ಲಿ ರಾಯಚೂರು ಜಿಲ್ಲೆಯ ಪ್ರತಿ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 15 ಕೆಜಿ ಸಾರವರ್ಧಿತ(Fortified) ಅಕ್ಕಿ ಹಾಗೂ ಪಿ.ಹೆಚ್.ಹೆಚ್.(ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಸದ್ಯಸರಿಗೆ 3 ಕೆಜಿ ಸಾರವರ್ಧಿತ(Fortified) ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.
ಸಾರವರ್ಧಿತ(Fortified) ಅಕ್ಕಿಯ ಬಳಕೆಯಿಂದಾಗುವ ಅನುಕೂಲತೆಗಳು:
ಈ ಅಕ್ಕಿಯಿಂದ ಕಬ್ಬಿಣ, ಸತು, ಫೋಲಿಕ್ ಆಮ್ಲ, ವಿಟಮಿನ್ ಎ, ಡಿ, ಬಿ6, ಬಿ12 ಮತ್ತು ಇತರೆ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯುತ್ತವೆ. ಪೊಷಕಾಂಶದ ಕೊರತೆಯಿಂದ ಉದ್ಭವಿಸುವ ಎನೇಮಿಯಾ, ರಾತ್ರಿ ಕುರುಡುತನ ಇತ್ಯಾದಿ ರೋಗ ಲಕ್ಷಣಗಳಿಂದ ದೂರವಿರಬಹುದು. ಆರೋಗ್ಯಕರ ಶರೀರ ಮತ್ತು ಮೆದುಳು ಉತ್ತಮಗೊಳ್ಳುವುದು. ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರಲ್ಲಿ ಕಾಣುವ ಅಪೌಷ್ಠಿಕತೆಯನ್ನು ದೂರ ಮಾಡಬಹುದು.
ಸಾರವರ್ಧಿತ ಅಕ್ಕಿಯ ಬಳಕೆ ಮಾಡುವ ವಿಧಾನ:
ಸಾರವರ್ಧಿತ ಅಕ್ಕಿಯು ಇತರೆ ಅಕ್ಕಿಯಂತೆಯೇ ಇದ್ದು, ರುಚಿ, ಬಣ್ಣ, ವಾಸನೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ಅಕ್ಕಿಯನ್ನು ಶೇಖರಿಸಲು ಹಾಗೂ ಬಳಕೆ ಮಾಡಲು ಯಾವುದೇ ವ್ಯತ್ಯಾಸ ಇರುವುದಿಲ್ಲ. ಎಲ್ಲಾ ಅಕ್ಕಿಯಂತೆಯೇ ಅನ್ನ ಮಾಡಬಹುದು.
ಸಾರವರ್ಧಿತ ಎಚ್ಚರವಹಿಸುವ ಅಂಶಗಳು:
ಸಾರವರ್ಧಿತ ಅಕ್ಕಿಯಲ್ಲಿ ಪೌಷ್ಠಿಕ ಅಂಶ ಸೇರ್ಪಡಿಸಿರುವ ಅಕ್ಕಿಕಾಳುಗಳು ಮಿಶ್ರಣಗೊಳಿಸಲಾಗಿರುತ್ತದೆ. ಈ ಕಾಳುಗಳು ನೋಡಲು ಹೊಳಪಿನಿಂದ ಪ್ಲಾಸ್ಟಿಕ್ ರೀತಿ ಕಾಣಿಸುತ್ತಿದ್ದು ಇದನ್ನು ಯಾವುದೇ ಕಲಬೆರಕೆ ಎಂದು ಪರಿಗಣಿಸದೇ ಆತಂಕಕ್ಕೊಳಗಾಗದೇ ಈ ಕಾಳುಗಳನ್ನು ಬೇರ್ಪಡಿಸದೇ ಬಳಕೆ ಮಾಡತಕ್ಕದ್ದು. ಬೇರೆಲ್ಲಾ ಅಕ್ಕಿಯನ್ನು ಬಳಕೆ ಮಾಡುವಂತೆಯೇ ಸಾರವರ್ಧಿತ ಅಕ್ಕಿಯನ್ನು ಕೂಡ ಅನ್ನ ಇತ್ಯಾದಿ ಆಹಾರ ಪದಾರ್ಥಗಳನ್ನಾಗಿ ಬಳಸಬಹುದು.
ಯಾವುದೇ ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದ್ದಲ್ಲಿ ಮತ್ತು ಇತರೆ ದೂರುಗಳಿಗೆ ನಿಶುಲ್ಕ ದೂರವಾಣಿ ಸಂಖ್ಯೆ 1967 ಗೆ ಹಾಗೂ ತಾಲ್ಲೂಕಿನಲ್ಲಿರುವ ತಹಶೀಲ್ದಾರ ಕಚೇರಿಗೆ ಅಥವಾ ಜಿಲ್ಲೆಯ ಉಪನಿದೇರ್ಶಕರ ಕಚೇರಿಗೆ ದೂರನ್ನು ಸಲ್ಲಿಸಬಹುದಾಗಿದೆ.
ಈ ಯೋಜನೆಗಳಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಲಾಗುವುದು ಮತ್ತು ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.