ಮಂಡ್ಯ: ನಿಷೇಧಾಜ್ಞೆ ನಡುವೆಯೇ ಶ್ರೀರಂಗಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ಮತ್ತೊಂದೆಡೆ ಹನುಮ ಮಂದಿರದಲ್ಲಿ ರಾಮ ಭಜನೆ ಪಠಣ ಪ್ರಾರಂಭಿಸಿದ್ದಾರೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮದರಸಾ ಶಿಕ್ಷಣ ಮುಂದುವರೆದಿದೆ. ಮೌಲ್ವಿಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಪಾಠ ಬೋಧಿಸುತ್ತಿದ್ದಾರೆ. ಮಸೀದಿಯಲ್ಲಿನ ಮದರಸಾ ನಿಲ್ಲಿಸಬೇಕು ಎಂದು ಆಗ್ರಹಿಸಿ ಇಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತಲ್ಲದೇ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯುವುದಾಗಿ ಹಿಂದೂಪರ ಸಂಘಟನೆಗಳು ಹೇಳಿಕೆ ನೀಡಿದ್ದವು.
BIG NEWS: ಪಠ್ಯ ಪುಸ್ತಕ ಸಮಿತಿಯಿಂದ ಮತ್ತೊಂದು ಎಡವಟ್ಟು; ಎರಡೂ ತರಗತಿಗಳಿಗೆ ಒಂದೇ ಪದ್ಯ
ಆದರೆ ಶ್ರೀರಂಗಪಟ್ಟಣದಲ್ಲಿ ಮನೆ ಮನೆಗಳಿಂದ ಬೈಕ್ ರ್ಯಾಲಿಯಲ್ಲಿ ಏಕಾಏಕಿ ಆಗಮಿಸಿದ ಹಿಂದು ಸಂಘಟನೆ ಕಾರ್ಯಕರ್ತರು ಕಿರಂಗೂರಿನ ಬನ್ನಿ ಮಂಟಪದ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ಆರಂಭವಾಗಿದೆ. ಜೈ ಶ್ರೀರಾಮ್ ಘೋಷಣೆ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ದಾರೆ. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಇನ್ನೊಂದೆಡೆ ಹನುಮಾನ್ ಮಂದಿರದಲ್ಲಿ ಸೇರಿರುವ ನೂರಾರು ಭಜರಂಗದಳ ಕಾರ್ಯಕರ್ತರು ರಾಮನಾಮ ಪಠಣೆ, ಭಜನೆ ಆರಂಭಿಸಿದ್ದಾರೆ.