ಬೆಂಗಳೂರು: ಪರೀಕ್ಷೆ ಎದುರಿಸದೇ ಮುಂದಿನ ತರಗತಿಗಳಿಗೆ ಪ್ರವೇಶ ನೀಡಿದ ಕುವೆಂಪು ವಿವಿ ಕುಲಪತಿ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಕುವೆಂಪು ವಿವಿ ದೂರಶಿಕ್ಷಣ ಕೇಂದ್ರದ ಪದವಿ ವಿದ್ಯಾರ್ಥಿಗಳಿಗೆ ಕೊರೋನಾ ಕಾರಣಕ್ಕೆ ಪರೀಕ್ಷೆ ಎದುರಿಸದೇ ಪಾಸ್ ಮಾಡಿ ಮುಂದಿನ ತರಗತಿಗಳಿಗೆ ಪ್ರವೇಶ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ್ದ ಕುಲಪತಿಗಳ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ದೂರ ಶಿಕ್ಷಣ ಕೇಂದ್ರದಲ್ಲಿ ಪರೀಕ್ಷೆ ಬರೆಯದೇ ಉತ್ತೀರ್ಣರಾದವರು ಮತ್ತೆ ಪರೀಕ್ಷೆ ಬರೆಯಬೇಕೆಂದು ಕುವೆಂಪು ವಿವಿ ಸಿಂಡಿಕೇಟ್ ಸಭೆ ಕೈಗೊಂಡಿದ್ದ ನಿರ್ಣಯವನ್ನು ಹೈಕೋರ್ಟ್ ಮಾನ್ಯ ಮಾಡದೇ ಕುಲಪತಿಗಳ ನಿರ್ಧಾರವನ್ನು ಎತ್ತಿಹಿಡಿದಿದೆ
ಕೊರೋನಾ ಕಾರಣದಿಂದಾಗಿ ದೂರಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳನ್ನು ಅವರ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಪಡೆದ ಅಂಕ ಮತ್ತು ಆಂತರಿಕ ಅಂಕಗಳ ಆಧಾರದಲ್ಲಿ ಉತ್ತಿರ್ಣಗೊಳಿಸುವಂತೆ ಯುಜಿಸಿ ಮಾರ್ಗಸೂಚಿ ನೀಡಿದ್ದು, ಇದನ್ನು ಅನುಸರಿಸಿ ಕುವೆಂಪು ವಿವಿ ಕುಲಪತಿ, 2019 -20 ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿತ್ತು. ಕುವೆಂಪು ವಿವಿ ಕುಲಪತಿಗಳ ಆದೇಶ ಒಪ್ಪದೇ ತಕರಾರು ತೆಗೆದ ಸಿಂಡಿಕೇಟ್ ಸಮಿತಿ ಆದೇಶವನ್ನು ರದ್ದುಪಡಿಸಲು ಫೆಬ್ರವರಿ 8 ರಂದು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿತ್ತು. ಅಲ್ಲದೆ, ಪರೀಕ್ಷೆ ಬರೆಯದೇ ಪಾಸಾದ ಎಲ್ಲರೂ ಮತ್ತೆ ಪರೀಕ್ಷೆ ಬರೆಯಬೇಕೆಂದು ನಿರ್ಣಯ ಅಂಗೀಕರಿಸಲಾಗಿತ್ತು.
ಇದನ್ನು ವಿದ್ಯಾರ್ಥಿಗಳು ಹಾಗೂ ಕೆಲವು ಅಧ್ಯಯನ ಕೇಂದ್ರಗಳು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಹಾಸನದ ಸುಜಲಾ ಕಾಲೇಜ್ ಆಫ್ ಕಾಮರ್ಸ್ ಸೇರಿದಂತೆ 7 ಜನರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯಪೀಠ ವಿಲೇವಾರಿ ಮಾಡಿದ್ದು, ಕುವೆಂಪು ವಿವಿ ಕುಲಪತಿ ನಿರ್ಧಾರವನ್ನು ಎತ್ತಿಹಿಡಿದಿದೆ.
ಕೊರೋನಾ ಕಾರಣಕ್ಕೆ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಈ ನಿರ್ಧಾರ ಕೈಗೊಳ್ಳುವ ಮೊದಲು ಆಲೋಚನೆ ಮಾಡಬೇಕಿತ್ತು. ಈಗಾಗಲೇ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಶುಲ್ಕ ಪಾವತಿಸಿ ಪ್ರವೇಶ ಪಡೆದುಕೊಂಡಿದ್ದಾರೆ. ಇಂತಹ ಹಂತದಲ್ಲಿ ಸಿಂಡಿಕೇಟ್ ನಿರ್ಣಯವನ್ನು ಮಾನ್ಯ ಮಾಡಲಾಗುವುದಿಲ್ಲವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಕೆ.ಎನ್. ಫಣೀಂದ್ರ ವಾದ ಮಂಡಿಸಿದರು.