ಬೆಂಗಳೂರು: ರಿಯಲ್ ಎಸ್ಟೇಟ್ ಹೆಸರಲ್ಲಿ ವಂಚಿಸಿದ್ದ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ‘ಲೊಡ್ಡೆ’ ಸಿನಿಮಾ ನಿರ್ಮಾಪಕ ಮಂಜುನಾಥ್ ಸೇರಿ ನಾಲ್ವರನ್ನು ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್, ಶಿವಕುಮಾರ್, ಗೋಪಾಲ, ಚಂದ್ರಶೇಖರ ಬಂಧಿತರು. ಕೋಮಲ್ ಅಭಿನಯದ ‘ಲೊಡ್ಡೆ’ ಸಿನಿಮಾ ನಿರ್ಮಿಸಿದ್ದ ಮಂಜುನಾಥ ಸಿನಿಮಾಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದ. ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣದೇ ಮಂಜುನಾಥನಿಗೆ ನಷ್ಟವಾಗಿದ್ದು, ರಾಜಾಜಿನಗರದಲ್ಲಿ ರಿಯಲ್ ಎಸ್ಟೇಟ್ ಕಚೇರಿಯನ್ನು ತೆರೆದಿದ್ದ.
ಈಗಲ್ ಟ್ರೀ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಹೆಸರಿನಲ್ಲಿ ಕಚೇರಿ ತೆರೆದು ಜಾಹೀರಾತು ನೀಡಿದ್ದ ಈತನನ್ನು ಪುಷ್ಪಕುಮಾರ್ ಸಂಪರ್ಕಿಸಿದ್ದು, ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಮಂಜುನಾಥ್ ಎರಡು ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಯಾರದೋ ನಿವೇಶನ ತೋರಿಸಿ ಕೊಡಿಸುವುದಾಗಿ ನಂಬಿಸಿದ್ದ. ದಾಖಲೆ ಕೇಳಿದಾಗ ಮಂಜುನಾಥನ ವಂಚನೆ ಜಾಲ ಬಯಲಾಗಿತ್ತು. ರಾಜಾಜಿನಗರ ಪೊಲೀಸ್ ಠಾಣೆಗೆ ಪುಷ್ಪಕುಮಾರ್ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ನಿರ್ಮಾಪಕ ಮಂಜುನಾಥ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.