ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶೀಘ್ರವೇ ಸರ್ಕಾರದಿಂದ ಗುಡ್ ನ್ಯೂಸ್ ಪಡೆಯುವ ಸಾಧ್ಯತೆಯಿದೆ.
ಜುಲೈ ವೇಳೆಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತಮ್ಮ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳದ ಪರಿಷ್ಕರಣೆ ಲಾಭ ಪಡೆಯಬಹುದು. ಜುಲೈ 1 ರಿಂದ ಕೇಂದ್ರವು ಸರ್ಕಾರಿ ನೌಕರರಿಗೆ ಮತ್ತೊಂದು ಡಿಎ ಹೆಚ್ಚಳ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ.
ಅಖಿಲ ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಡಿಎಯನ್ನು ಸರ್ಕಾರವು ಪರಿಷ್ಕರಿಸುತ್ತದೆ. ಈ ವರ್ಷದ ಜನವರಿಯಲ್ಲಿ 7 ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಿಸಲಾಗಿತ್ತು. ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಶೇ.3ರಷ್ಟು ಹೆಚ್ಚಿಸಲಾಗಿದೆ.
ಈ ಬಾರಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳ ಗ್ರಾಹಕಬೆಲೆ ಸೂಚ್ಯಂಕದ ಪ್ರಕಾರ ಡಿಎಯನ್ನು 4 ಪ್ರತಿಶತದಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ವರದಿ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರು ಶೇಕಡಾ 38 ರಷ್ಟು ತುಟ್ಟಿಭತ್ಯೆ ಪಡೆಯುತ್ತಾರೆ. ಪ್ರಸ್ತುತ ಡಿಎ ದರವನ್ನು ಉದ್ಯೋಗಿಯ ಮೂಲ ವೇತನದಿಂದ ಗುಣಿಸಿ ಲೆಕ್ಕ ಹಾಕಲಾಗುತ್ತದೆ.
ಮೂಲ ವೇತನ ರೂ. 18,000 ಆಗಿರುವ ಉದ್ಯೋಗಿಯ ಸಂಬಳದಂತೆ ಲೆಕ್ಕಹಾಕಿದರೆ ಪ್ರಸ್ತುತ ಶೇಕಡಾ 31 ಡಿಎ ದರದಲ್ಲಿ ಉದ್ಯೋಗಿ 6,120 ರೂ. ಡಿಎ ಪಡೆಯುತ್ತಿದ್ದಾರೆ. ಜುಲೈನಲ್ಲಿ ಇತ್ತೀಚಿನ ಡಿಎ ಹೆಚ್ಚಳವನ್ನು ಶೇಕಡಾ 4 ಕ್ಕೆ ಜಾರಿಗೊಳಿಸಿದರೆ ಉದ್ಯೋಗಿಗೆ 6,840 ರೂ ಡಿಎ ಸಿಗುತ್ತದೆ. ಅಂದರೆ ಇತ್ತೀಚಿನ ಡಿಎ ಹೆಚ್ಚಳದ ನಂತರ ರೂ. 720 ಹೆಚ್ಚಳ ಮಾಡಲಾಗುತ್ತದೆ.