ಬೆಳಗಾವಿ: ಪಠ್ಯ ಪುಸ್ತಕ ಪರೀಷ್ಕರಣೆ ವಿವಾದ ರಾಜ್ಯಾದ್ಯಂತ ಹೊಸ ಹೋರಾಟಕ್ಕೆ ಕಾರಣವಾಗುತ್ತಿದ್ದು, ಲಿಂಗಾಯಿತ ಮಹಾಸಭಾ ರಾಜ್ಯ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದೆ.
9ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಬಸವಣ್ಣನವರ ಬಗ್ಗೆ ಹಲವು ತಪ್ಪು ಮಾಹಿತಿಗಳನ್ನು ನೀಡಲಾಗಿದೆ. ಇಂತಹ ದೋಷಗಳನ್ನು ಎಸಗಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ರಾಜ್ಯ ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ನೇತೃತ್ವದಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಠ್ಯದಲ್ಲಿನ ದೋಷಗಳನ್ನು ರಾಜ್ಯ ಸರ್ಕಾರ ಒಂದು ವಾರದಲ್ಲಿ ಸರಿಪಡಿಸಿ ಹೊಸ ಪುಸ್ತಕ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಲಿಂಗಾಯತ ಸಮುದಾಯ ಉಗ್ರ ಹೋರಾಟ ನಡೆಸಲಿದೆ ಎಂದು ಬಸವರಾಜ್ ಎಚ್ಚರಿಸಿದ್ದಾರೆ.
ಬಸವಣ್ಣನವರ ಆಶಯಗಳಿಗೆ ತದ್ವಿರುದ್ಧವಾದ ವಿಚಾರಗಳನ್ನು, ತಪ್ಪು ಮಾಹಿತಿಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಪ್ರಸ್ತುತ ಆರಂಭಿಸುವ ಹೊಸ ಪಠ್ಯ ಸೇರ್ಪಡೆಯನ್ನೂ ಕೈಬಿಡಬೇಕು ಎಂದು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಒತ್ತಾಯಿಸಿದ್ದಾರೆ.