ಮುಂಬೈ: ಸಾಲಗಾರರ ಉಪಟಳ ತಾಳಲಾಗುತ್ತಿಲ್ಲ ಎಂದು 50 ಲಕ್ಷ ರೂಪಾಯಿ ಸಾಲ ಉಳಿಸಿಕೊಂಡಿದ್ದ ವ್ಯಕ್ತಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಲು ಪ್ರಯತ್ನಿಸಿ, ಏಳು ವರ್ಷದ ಮಗಳನ್ನು ಕಳೆದುಕೊಂಡ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.
ರಿಯಾನ್ ಸ್ಟೀಫನ್ ಜೋಸೆಫ್ ಬ್ರಾಕೋ (37) ಈ ರೀತಿ ಮಾಡಿದ ವ್ಯಕ್ತಿ. ಈತ ಮತ್ತು ಈತನ ಪತ್ನಿ ಪೂನಂ (30) ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ವಿರುದ್ಧವೂ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕಾಶಿಮಿರಾ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ರಿಯಾನ್ ಸುಮಾರು 50 ಲಕ್ಷ ರೂ. ಸಾಲ ಹೊಂದಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರ ಸಾಲಗಾರರು ತಮ್ಮ ಹಣವನ್ನು ಮರಳಿ ಕೇಳುತ್ತಿದ್ದಂತೆ, ಅವರು ವಸೈ (ಇ) ನಲ್ಲಿರುವ ಫ್ಲಾಟ್ ಅನ್ನು 30 ಲಕ್ಷಕ್ಕೆ ಮಾರಾಟ ಮಾಡಿದರು ಮತ್ತು ಸ್ವಲ್ಪ ಮೊತ್ತವನ್ನು ಹಿಂದಿರುಗಿಸಿದ್ದರು. ಮೀರಾ ರಸ್ತೆಯ ವಿವಿಧ ಬಾರ್‌ಗಳಲ್ಲಿ ಸುಮಾರು ₹ 6 ಲಕ್ಷ ಖರ್ಚು ಮಾಡಿದ್ದಾರೆ.
BIG NEWS: ಅಕ್ರಮ ಕಲ್ಲು ಗಣಿಗಾರಿಕೆ; ಕಾಂಗ್ರೆಸ್ ಮುಖಂಡನ ಪತ್ನಿ ವಿರುದ್ಧ FIR ದಾಖಲು
ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕುಟುಂಬ ಸೋಮವಾರ, ಮುಂಬೈ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್‌ಗೆ ತೆರಳಿ ರೂಮ್ ಮಾಡಿತ್ತು. ಅಲ್ಲಿ ತಂಪುಪಾನೀಯ ಮತ್ತು ಇಲಿಪಾಷಾಣ ಸೇರಿಸಿ ಎಲ್ಲರೂ ಸೇವಿಸಿದ್ದರು. ರಿಯಾನ್ ಮದ್ಯ ಸೇವಿಸಿದ್ದ. ಇದಾಗಿ, ರಿಯಾನ್‌ಗೆ ಲೂಸ್ ಮೋಷನ್ ಶುರುವಾಗಿತ್ತು ಮತ್ತು ಪೂನಂ ವಾಂತಿ ಮಾಡಿಕೊಂಡಿದ್ದರು. ಆದರೆ, ಏಳು ವರ್ಷದ ಮಗಳು ಅಲ್ಲೇ ಮೃತಪಟ್ಟಿದ್ದಳು.
ಬಹಳ ಹೊತ್ತಾದ ಬಳಿಕ, ಪೂನಂ ಜೋರಾಗಿ ಅಳುತ್ತಿರುವುದು ಹೋಟೆಲ್ ಸಿಬ್ಬಂದಿ ಗಮನಕ್ಕೆ ಬಂದಿದೆ. ಅವರು ಹೋಗಿ ನೋಡಿದಾಗ ಮಗಳು ಮೃತಪಟ್ಟಿರುವುದು ಕಂಡುಬಂದಿದೆ.
ರಿಯಾನ್ ಸ್ಥಳದಲ್ಲಿರಲಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿದ್ದರು. ಮೀರಾ ರೋಡ್ ರೈಲ್ವೆ ನಿಲ್ದಾಣಕ್ಕೆ ತೆರಳಿದ ರಿಯಾನ್ ಲೋಕಲ್ ಟ್ರೇನ್ ಅಡಿಗೆ ಬಿದ್ದು ಸಾಯಲು ಹೋಗಿದ್ದ. ಆದರೆ ಹಾಗೆ ಮಾಡಲಿಲ್ಲ. ರಿಯಾನ್ ಮತ್ತು ಪೂನಂ ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.