ನವದೆಹಲಿ: ಕಿಡ್ನಿ ಕಸಿ ದಂಧೆ ಭೇದಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ.
ಕುಲದೀಪ್ ರೇ ವಿಶ್ವಕರ್ಮ(ಕಿಂಗ್‌ಪಿನ್), ಸರ್ವಜೀತ್ ಜೈಲ್ವಾಲ್(37), ಶೈಲೇಶ್ ಪಟೇಲ್(23), ಎಂ.ಡಿ. ಲತೀಫ್(24), ವಿಕಾಸ್(24), ರಂಜಿತ್ ಗುಪ್ತಾ(43), ಡಾ. ಸೋನು ರೋಹಿಲ್ಲಾ(37), ಡಾ. ಸೌರಭ್ ಮಿತ್ತಲ್(37), ಓಂ ಪ್ರಕಾಶ್ ಶರ್ಮಾ(48) ಮತ್ತು ಮನೋಜ್ ತಿವಾರಿ(36) ಬಂಧಿತ ಆರೋಪಿಗಳಾಗಿದ್ದಾರೆ.
ನಿರಾಶ್ರಿತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದ ಗ್ಯಾಂಗ್ 20 ಕ್ಕೂ ಹೆಚ್ಚು ಮೂತ್ರಪಿಂಡಗಳನ್ನು ಅಕ್ರಮವಾಗಿ ಕಸಿ ಮಾಡುವಲ್ಲಿ ತೊಡಗಿಸಿಕೊಂಡಿತ್ತು. ಹೌಜ್ ಖಾಸ್ ನಲ್ಲಿ ಕಿಡ್ನಿ ಕಸಿ ದಂಧೆ ನಡೆಸುತ್ತಿದ್ದು, ಬಡವರನ್ನು ಗುರಿಯಾಗಿಸಿಕೊಂಡು ಹಣದ ಆಮಿಷವೊಡ್ಡುವ ಬಗ್ಗೆ ಮೇ 26 ರಂದು ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಸುಳಿವು ಸಿಕ್ಕಿತ್ತು ಎಂದು ಉಪ ಪೊಲೀಸ್ ಆಯುಕ್ತ(ದಕ್ಷಿಣ) ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ.
ಒಬ್ಬ ವ್ಯಕ್ತಿಗೆ ಅರೆವಳಿಕೆ ನೀಡಿ ಖಾಸಗಿ ಲ್ಯಾಬ್ ಗೆ ಕರೆದೊಯ್ದು ನಂತರ ಕಿಡ್ನಿ ಕಸಿ ಮಾಡಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಹೊಟ್ಟೆ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಸರ್ವಜೀತ್ ಮತ್ತು ವಿಪಿನ್ ಅವರನ್ನು ಲ್ಯಾಬ್ ಗೆ ಕರೆದೊಯ್ಯುತ್ತಿದ್ದಾರೆ ಎಂದು ಒಬ್ಬ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಅವರು ಕಿಡ್ನಿ ದಾನಕ್ಕಾಗಿ ಕರೆದುಕೊಂಡು ಹೋಗುತ್ತಿದ್ದಾರೆಂದು ತಿಳಿದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.