ಪ್ರಕೃತಿಯ ಸೃಷ್ಟಿಯೇ ಅಂತಹದ್ದು. ಈ ಪ್ರಕೃತಿಯು ನಮ್ಮನ್ನು ಯಾವಾಗಲೂ ವಿಸ್ಮಯಗೊಳಿಸುತ್ತಲೇ ಇರುತ್ತದೆ. ಈ ಪ್ರಕೃತಿ ಎಷ್ಟು ಸುಂದರ-ಸೊಬಗನ್ನು ಹೊಂದಿರುತ್ತದೆಯೋ ಅಷ್ಟೇ ವಿಚಿತ್ರ-ವೈಶಿಷ್ಟ್ಯತೆಗಳನ್ನು ಸೃಷ್ಟಿ ಮಾಡುತ್ತಲೇ ಇರುತ್ತದೆ.
ಇಂತಹದ್ದೊಂದು ವಿಚಿತ್ರ ಮತ್ತು ವಿಸ್ಮಯಗೊಳಿಸುವಂತಹ ಫೋಟೋವನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಎಲ್ಲರನ್ನು ವಿಸ್ಮಯಗೊಳಿಸಿದ್ದಾರೆ.
ಈ ಚಿತ್ರ ಒಂದು ಎಲೆಯ ರೀತಿಯಲ್ಲಿದೆ. ಎಷ್ಟೇ ಗಮನವಿಟ್ಟು ನೋಡಿದರೂ ಇದು ಎಲೆ ಅಲ್ಲದೇ ಮತ್ತೇನೂ ಅಲ್ಲ ಎಂದು ಭಾಸವಾಗುತ್ತದೆ. ಆದರೆ, ಇದರ ವಿಡಿಯೋ ನೋಡಿದರೆ ಈ ಎಲೆಗೆ ಜೀವವಿದ್ದಂತೆ ಕಾಣುತ್ತದೆ. ಇದರ ಚಲನಶೀಲತೆಯನ್ನು ಗಮನಿಸಿದರೆ ಇದು ನಡೆದಾಡುವ ಎಲೆ ಎಂದು ಕಾಣುತ್ತದೆ. ಆದರೆ, ನೀವಂದುಕೊಂಡಂತೆ ಇದು ನಡೆದಾಡುವ ಎಲೆಯಲ್ಲ. ಬದಲಿಗೆ ಇದೊಂದು ಬಗೆಯ ಕೀಟ !
ಹೌದು, ಪರ್ವೀನ್ ಅವರು ಪೋಸ್ಟ್ ಮಾಡಿರುವುದು ಎಲೆ ಕೀಟ (leaf insect). ಹುಬ್ಬೇರಿಸಬೇಡಿ, ಎಲೆಯಂತೇ ಕಾಣುವ ಈ ಕೀಟವನ್ನು ಅವರು ಪ್ರಕೃತಿಯ ವಿಸ್ಮಯವನ್ನು ತೋರಿಸಬೇಕೆಂಬ ಉದ್ದೇಶದಿಂದ ಪೋಸ್ಟ್ ಮಾಡಿದ್ದು, ಇದಕ್ಕೆ ಮರೆಮಾಚುವ ಕೀಟ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಎಲೆಕೀಟದ ಫೋಟೋವನ್ನು ನೋಡಿದ ನೆಟ್ಟಿಗರಲ್ಲಿ ಅನೇಕರು ಆಶ್ಚರ್ಯಗೊಂಡಿದ್ದರೆ, ಮತ್ತೆ ಕೆಲವರು ಇದರ ಅಸಲಿಯತ್ತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ 4k ಗೂ ಅಧಿಕ ನೆಟ್ಟಿಗರನ್ನು ಆಕರ್ಷಿಸಿದ್ದರೆ, ನೋಡಿದವರಲ್ಲಿ ಬಹುತೇಕ ಮಂದಿ ತಮ್ಮ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇದು ನಿಜವಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದರೆ, ಮತ್ತೋರ್ವ ನೆಟ್ಟಿಗ, ನಮ್ಮ ಮನೆಯ ಸಮೀಪವಿರುವ ಮರದಲ್ಲಿ ಇಂತಹದ್ದೇ ಕೀಟವನ್ನು ನೋಡಿದ್ದೇನೆ. ಅದು ನಿಧಾನವಾಗಿ ಚಲಿಸುತ್ತಿದ್ದುದನ್ನು ಗಮನಿಸಿದ್ದೇನೆ ಎಂದು ಹೇಳಿದ್ದಾರೆ.