ಮೊಬೈಲ್, ಇಂಟರ್ನೆಟ್, ವಾಟ್ಸಾಪ್ ಇವೆಲ್ಲ ನಮ್ಮ ಜೀವನದ ಅತಿ ಮುಖ್ಯ ಭಾಗಗಳಾಗಿ ಹೋಗಿವೆ. ಇವೆಲ್ಲ ಇಲ್ಲದೆ ಹೋದರೆ ನಮ್ಮ ಜೀವನ ಹೇಗಿರುತ್ತಿತ್ತು ಅಂತ ನಮಗೆ ಊಹೆ ಮಾಡೋದಕ್ಕೂ ಅಸಾಧ್ಯ. ವಾಟ್ಸಾಪ್ ಮೆಸೇಜ್, ವಿಡಿಯೋ ಕಾಲ್, ಹೀಗೆ ಇವುಗಳ ಉಪಯೋಗ ಒಂದಾ ಎರಡಾ..? ಆದರೆ, ಇವೇ ಟೆಕ್ನಾಲಜಿಗಳನ್ನ ಮುಂದೆ ಇಟ್ಟುಕೊಂಡು ಕೆಲ ದುಷ್ಕರ್ಮಿಗಳು ಸುಲಿಗೆ ಮಾಡುತ್ತಿದ್ದಾರೆ. ಇಲ್ಲಿ ನೋಡಿ, ಹ್ಯಾಕರ್ ಒಬ್ಬ ಮಗಳ ಹೆಸರಿನಲ್ಲಿ ಅಮ್ಮನಿಂದ ಹೇಗೆ ಹಣ ದೋಚಿದ್ದ ಅಂತ.
ಅಪ್ಪ-ಅಮ್ಮ ಕಷ್ಟಪಟ್ಟು ದುಡಿದು, ಮಕ್ಕಳಿಗೆ ಏನ್ ಬೇಕೋ ಅದೆಲ್ಲವನ್ನೂ ಕೊಡಿಸ್ತಾರೆ. ಅವರು ಹೊಟ್ಟೆ ತುಂಬಾ ಊಟ ಮಾಡದಿದ್ದರೂ ಪರವಾಗಿಲ್ಲ.. ಮಕ್ಕಳಿಗೆ ಏನು ಬೇಕೋ ಅದೆಲ್ಲವನ್ನೂ ಕೊಡಿಸ್ತಾರೆ. ಈಗ ಇದೇ ಪಾಲಕರ ವೀಕ್ನೆಸ್ ಇಟ್ಟುಕೊಂಡು ಹ್ಯಾಕರ್, ಮಹಿಳೆಯೊಬ್ಬಳಿಂದ 16 ಸಾವಿರ ಪೌಂಡ್ ಅಂದರೆ, ಹೆಚ್ಚು ಕಡಿಮೆ 15.62 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ.
ಬಿಬಿಸಿ ಕೊಟ್ಟ ಮಾಹಿತಿ ಪ್ರಕಾರ ಹಣ ಕಳೆದುಕೊಂಡ ಮಹಿಳೆ ಬ್ರಿಟನ್ ನ ಪೌಲಾ ಬಾಟನ್. ಈಕೆಗೆ ವಾಟ್ಸಾಪ್ ಲ್ಲಿ ಮಗಳ ನಂಬರ್ನಿಂದ ಸಂದೇಶ ಬಂದಿದೆ. ಮಗಳ ಹೆಸರಿನಿಂದ ಬಂದ ಮೆಸೇಜ್ ಆಗಿದ್ದರಿಂದ ಆಕೆ ಕೂಡಾ ಆ ಮೆಸೇಜ್ಲ್ಲಿ ಬಂದಿರೋದಕ್ಕೆಲ್ಲ ರಿಪ್ಲೈ ಕೊಟ್ಟಿದ್ದಾಳೆ. ಕೊನೆಗೆ ಈ ಮೊಬೈಲ್ ನಂಬರ್ ಬದಲಾಯಿಸಿ ಅನ್ನೋ ಮೆಸೇಜ್ ಕೂಡಾ ಬಂದಿದೆ.
ಮಗಳೇ ಇದೆಲ್ಲವನ್ನ ಹೇಳ್ತಿದ್ದಾಳೆ ಅಂತ ಆಕೆ ನಂಬರ್ ಕೂಡಾ ಬದಲಾಯಿಸಿದ್ದಾಳೆ. ಆ ನಂತರ ಅದೇ ನಂಬರ್ನಿಂದ ಹಣದ ಬೇಡಿಕೆಯನ್ನ ಪೌಲಾ ಬಾಟನ್ ಮುಂದೆ ಇಟ್ಟಿದ್ದಾನೆ. ಆಕೆ ಮೊದಲಿಗೆ ದುಡ್ಡು ಕೊಡುವುದಿಲ್ಲ ಅಂತ ಹೇಳಿದರೂ ಕೊನೆಗೆ ಮಗಳ ನಂಬರ್ನಿಂದಲೇ ಅಕೌಂಟ್ ಡಿಟೈಲ್ಸ್ ಬಂದಿರೋದ್ರಿಂದ ಮಗಳಿಗೆ ತುರ್ತಾಗಿ ಹಣ ಬೇಕಾಗಿದೆಯೋ ಏನೋ ಅಂತ, 15 ಸಾವಿರ ಪೌಂಡ್ ದುಡ್ಡನ್ನ ಕೊಟ್ಟಿದ್ದಾಳೆ. ಆಮೇಲೆ ಮಗಳ ಬಳಿ ದುಡ್ಡಿನ ಬಗ್ಗೆ ಮಾತನಾಡಿದಾಗಲೇ ಗೊತ್ತಾಗಿದ್ದು ಆಕೆಯನ್ನ ಯಾರೋ ಮೂರ್ಖಳನ್ನಾಗಿ ಮಾಡಿದ್ದಾರೆ ಅಂತ.
ಅಸಲಿಗೆ ಪೌಲಾ ಬಾಟನ್ ಮಗಳ ವಾಟ್ಸಾಪ್ ನಂಬರ್ನ್ನ ಹ್ಯಾಕರ್, ಹ್ಯಾಕ್ ಮಾಡಿ ದುಡ್ಡನ್ನ ಲಪಟಾಯಿಸಿದ್ದಾನೆ. ಇಂಟರ್ನೆಟ್ ಮೂಲಕ ದೂರದಲ್ಲೆಲ್ಲೋ ಕೂತು ದುಡ್ಡು ಲಪಟಾಯಿಸೋದು ಹ್ಯಾಕರ್ಸ್ ಗಳ ಕಸುಬಾಗಿ ಹೋಗಿದೆ. ಇತ್ತೀಚೆಗೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ಪೊಲೀಸರು ಹ್ಯಾಕರ್ಸ್ಗಳನ್ನ ಹುಡುಕಾಡುತ್ತಿದ್ಧಾರೆ. ಇಂತಹ ಪ್ರಕರಣಗಳಲ್ಲಿ ಹ್ಯಾಕರ್ಸ್ ಸಿಕ್ಕಾಕಿಕೊಳ್ಳುವುದು ಕಡಿಮೆ. ಆದ್ದರಿಂದ ದುಡ್ಡಿನ ಬೇಡಿಕೆ ಇಟ್ಟ ಯಾವುದೇ ಮೆಸೇಜ್ ಬಂದರೂ ನೀವು ದುಡ್ಡು ಕೊಡುವ ಮುನ್ನ ಎಚ್ಚರಿಕೆಯಿಂದ ಇರಿ. ಇಲ್ಲವಾದಲ್ಲಿ ನಿಮಗೂ ಮೂರು ನಾಮ ಹಾಕಿ ಬಿಡ್ತಾರೆ ಈ ಹ್ಯಾಕರ್ಸ್.