ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮದ ನಂತರ ಕುಸಿದು ಬಿದ್ದಿದ್ದ ಕೆಕೆ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುಂಞತ್ ಅವರ ಅಸ್ವಾಭಾವಿಕ ಮರಣವನ್ನು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ತಳ್ಳಿಹಾಕಿದೆ.
ಈ ಹಿಂದೆ, ಕೋಲ್ಕತ್ತಾ ಪೊಲೀಸರು ಗಾಯಕನ ಸಾವಿನ ಬಗ್ಗೆ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಅವರ ಮುಖ ಮತ್ತು ತಲೆಗೆ ಗಾಯಗಳಾಗಿವೆ ಎನ್ನಲಾಗಿತ್ತು.
ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯು ಸಾವಿಗೆ ಸಂಬಂಧಿಸಿದಂತೆ ಅಸ್ವಾಭಾವಿಕ ಎಂದು ಯಾವುದನ್ನೂ ಸೂಚಿಸಿಲ್ಲ. ಮೇ 31 ರಂದು ಮಂಗಳವಾರ ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗಿದ ನಂತರ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರ್ಯಾಂಡ್ ಹೋಟೆಲ್ನಲ್ಲಿ ಕೆಕೆ ಕುಸಿದುಬಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಅಂತಿಮ ಶವಪರೀಕ್ಷೆ ವರದಿಯನ್ನು 72 ಗಂಟೆಗಳಲ್ಲಿ ಪ್ರಕಟಿಸಲಾಗುವುದು. ಅವರ ಹಠಾತ್ ಸಾವಿನ ಬಗ್ಗೆ ಜನರು ಆಘಾತ ಮತ್ತು ಅನುಮಾನ ವ್ಯಕ್ತಪಡಿಸಿದ್ದಾರೆ.