ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ಇದೀಗ 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರ ಕುರಿತು ಪಾಠದಲ್ಲಿ ಕೆಲವು ಬದಲಾವಣೆ ಮಾಡಿರುವುದಕ್ಕೆ ಲಿಂಗಾಯಿತ ಸಮುದಾಯದ ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರು ಉಪನಯನದ ನಂತರ ಕೂಡಲಸಂಗಮಕ್ಕೆ ಹೋದರು ಎಂದು ಬರೆಯಲಾಗಿದೆ. ಆದರೆ ತನ್ನ ಸಹೋದರಿ ಅಕ್ಕನಾಗಾಯಿಗೆ ಇಲ್ಲದ ಉಪನಯನ ತನಗ್ಯಾಕೆ ಎಂದು ಧಿಕ್ಕರಿಸಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು ಎಂಬುದು ಇತಿಹಾಸ. ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು ಎಂದು ಬರೆದಿರುವುದು ತಪ್ಪು. ಶೈವ ಗುರುಗಳು ಗುಡಿ ಸ್ಥಾವರ ಲಿಂಗಾರಾಧಕರು ಅವರು ಹೇಗೆ ಇಷ್ಟಲಿಂಗ ದೀಕ್ಷೆ ಮಾಡಬಲ್ಲರು? ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವುದು…… ಹೀಗೆ ಬಸವಣ್ಣನವರ ಬಗ್ಗೆ ಹಲವು ತಪ್ಪು ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿರುವುದು ಖಂಡನೀಯ ಎಂದು ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಪಠ್ಯ ಪುಸ್ತಕದಲ್ಲಿನ ಈ ಅನೈತಿಹಾಸಿಕ ತಪ್ಪುಗಳನ್ನು ಸರಿಪಡಿಸಿ ಪಠ್ಯ ಪುಸ್ತಕ ಪ್ರಕಟಿಸಬೇಕು ಇಲ್ಲವಾದಲ್ಲಿ ಲಿಂಗಾಯತ ಸಮುದಾಯದ ಮಠಾಧೀಶರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.