ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಗರ್ಭಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ಪೂಜೆ ನೆರವೇರಿಸಿದರು.
ರಾಮ ಮಂದಿರದ ಗರ್ಭಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದಕ್ಕೆ ಮೊದಲು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗಿದೆ. ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಅಯೋಧ್ಯೆಯ 90 ಸಂತರು ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಆಗಸ್ಟ್ 5, 2020 ರಾಮಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ(SRJBTK), ರಾಮಮಂದಿರದ ನಿರ್ಮಾಣದ ಮೇಲ್ವಿಚಾರಣೆಯ ಪ್ರಾಧಿಕಾರವಾಗಿದೆ.
ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಇಂದು ಗರ್ಭಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕರ್ನಾಟಕ ಮತ್ತು ತೆಲಂಗಾಣದ ಗ್ರಾನೈಟ್ ಕಲ್ಲಿನ ಬ್ಲಾಕ್ ಗಳನ್ನು ಬಳಸಿ ಸ್ತಂಭ ನಿರ್ಮಿಸಲಾಗಿದೆ.
ಗರ್ಭಗುಡಿಯ ಸುತ್ತಲೂ ಕೆತ್ತಿದ ಮರಳುಗಲ್ಲುಗಳ ಸ್ಥಾಪನೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಡಿಸೆಂಬರ್ 2023 ರ ವೇಳೆಗೆ ಗರ್ಭಗುಡಿ ಮತ್ತು ರಾಮಲಲ್ಲಾ ವಿಗ್ರಹವನ್ನು ಹೊಂದಿರುವ ದೇವಾಲಯದ ಕೆಳ ಮಹಡಿಯು ಪೂಜೆಗೆ ಸಿದ್ಧವಾಗಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.