ಬೆಂಗಳೂರು: ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯಿಂದ ಪಿಯುಸಿ ಪಠ್ಯವನ್ನೂ ಕೂಡ ಪರಿಷ್ಕರಣೆ ಮಾಡಲಾಗಿದೆ.
ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಸಾಹಿತಿಗಳು, ಚಿಂತಕರು, ಮಠಾಧೀಶರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಇತಿಹಾಸದ ಪಠ್ಯವನ್ನು ಇದೇ ಸಮಿತಿ ಪರಿಷ್ಕರಣೆ ಮಾಡಿದೆ.
‘ಹೊಸ ಧರ್ಮಗಳ ಉದಯ’ ಅಧ್ಯಾಯದಲ್ಲಿ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ ಅಂಶಗಳಿವೆ ಎಂದು ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಅಧ್ಯಾಯವನ್ನು ಪರಿಷ್ಕರಿಸಲಾಗಿದ್ದು, ಆಕ್ಷೇಪಣೆಯಿಂದ ಕೂಡಿದ ಅಂಶಗಳನ್ನು ಕೈಬಿಡಲಾಗಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಈ ಪಠ್ಯವನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯುವುದು ಬಾಕಿ ಉಳಿದಿದೆ ಎಂದು ಹೇಳಲಾಗಿದೆ.