ಬೆಂಗಳೂರು: ದ್ವಿತೀಯ ಪಿಯುಸಿ ಮೌಲ್ಯಮಾಪಕರ ಸಂಭಾವನೆಯನ್ನು ಶೇಕಡ 20 ರಷ್ಟು ಹೆಚ್ಚಳ ಮಾಡಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಕಾರ್ಯ, ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ನಿರತರಾದ ಉಪನ್ಯಾಸಕರಿಗೆ ನೀಡುವ ಸಂಭಾವನೆಯನ್ನು ಶೇಕಡ 20 ರಷ್ಟು ಹೆಚ್ಚಳ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೂರು ಗಂಟೆ ಅವಧಿಯ ಕನ್ನಡ ಆವೃತ್ತಿಯಲ್ಲದ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಪ್ರತಿಯೊಬ್ಬರಿಗೆ 2082 ರೂಪಾಯಿ ನಿಗದಿಪಡಿಸಲಾಗಿದ್ದು, ಇದನ್ನು ಪರಿಷ್ಕರಿಸಿ 2498 ರೂ.ಗೆ ಹೆಚ್ಚಳವಾಗಿದೆ. ವಾಹನ ಚಾಲಕರಿಗೆ 696 ರೂಪಾಯಿ ನೀಡಲಾಗುತ್ತಿದ್ದು, ಇದನ್ನು 1253 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ಸಂಭಾವನೆ ದರ ಹೆಚ್ಚಳ ಮಾಡಲಾಗಿದೆ.
ಯುಜಿಸಿ ವೇತನ ಪಡೆಯುವ ಉಪನ್ಯಾಸಕರು ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಂಡರೆ ಅವರಿಗೆ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆ ಮಾತ್ರ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನ್ವಯ ನೀಡಲಾಗುವುದು. ಇದರ ಹೊರತು ಬೇರೆ ಯಾವುದೇ ಸಂಭಾವನೆ ನೀಡುವಂತಿಲ್ಲ ಎನ್ನಲಾಗಿದೆ.