ಒಟ್ಟಾವಾ: ಅಮೆರಿಕದ ಟೆಕ್ಸಾಸ್ ನಲ್ಲಿ ಶಾಲಾ ಮಕ್ಕಳ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಸದ್ಯಕ್ಕೆ ಬಂದೂಕು ಆಮದು ಮತ್ತು ರಫ್ತು ನಿಷೇಧಿಸಿದೆ. ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಬಂದೂಕು ಆಮದು ಮತ್ತು ರಫ್ತು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಟೆಕ್ಸಾಸ್ ಘಟನೆ ನಂತರ ಕೆನಡಾ ಬಂದೂಕು ಮಾರಾಟವನ್ನು ಫ್ರೀಜ್ ಮಾಡಲು ಕಾನೂನು ಜಾರಿಗೆ ಮುಂದಾಗಿದೆ. ಬಂದೂಕು ಬಳಸಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕ್ರಮಗಳ ಅಗತ್ಯವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ.
ನಾವು ದೃಢ ಮತ್ತು ವೇಗವಾಗಿ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಅದನ್ನು ಎದುರಿಸಲು ಹೆಚ್ಚು ಕಷ್ಟಕರವಾಗುತ್ತದೆ ಎಂದು ಅವರು ಟೆಕ್ಸಾಸ್ ಉಲ್ಲೇಖಿಸಿ ಹೇಳಿದ್ದಾರೆ.
ಗಣ್ಯ ಕ್ರೀಡಾ ಶೂಟರ್ ಗಳು, ಒಲಂಪಿಕ್ ಅಥ್ಲೀಟ್ ಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಇತರೆ ವರ್ಗದವರಿಗೆ ಹ್ಯಾಂಡ್ ಗನ್ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ಈಗಾಗಲೇ ಹ್ಯಾಂಡ್ ಗನ್ ಗಳನ್ನು ಹೊಂದಿರುವ ಕೆನಡಿಯನ್ನರು ಅವುಗಳನ್ನು ಇರಿಸಿಕೊಳ್ಳಲು ಅನುಮತಿಸಲಾಗುವುದು. ಗನ್ ರೀತಿಯಂತೆ ಇರುವ ಆಟಿಕೆಗಳನ್ನು ಕೂಡ ನಿಷೇಧಿಸಲಾಗುವುದು ಎನ್ನಲಾಗಿದೆ.